ಬೆಳ್ತಂಗಡಿ, ಮಾ.01 (DaijiworldNews/PY): ಮಡ್ಯಂತಾರು ಪಣಕಜೆಯ ನಿವಾಸಿ ನಿಯಾಝ್ ಪಣಕಜೆ ಅವರು ಕೂಲಿ ಮಾಡುತ್ತಲೇ ವಿದ್ಯಾಭ್ಯಾಸ ಹಾಗೂ ಪಿಎಚ್.ಡಿ ಪಡೆದಿದ್ದಾರೆ.

ರೋಲ್ ಆಫ್ ಕಾರ್ಪೊರೇಟಿವ್ ಬ್ಯಾಂಕಿಂಗ್ ಇನ್ ಸೋಶಿಯೋ ಎಕನಾಮಿಕ್ ಡೆವಲಂಪ್ಮೆಂಟ್ ಆಫ್ ರೂರಲ್ ಮುಸ್ಲಿಮ್ ಕಮ್ಯುನಿಟೀಸ್- ಎ ಸ್ಟಡಿ ಇನ್ ಡಿಕೆ ಡಿಸ್ಟ್ರಕ್ಟ್ ಆಫ್ ಕರ್ನಾಟಕ ಎನ್ನುವ ಸಂಶೋಧನಾ ಮಹಾ ಪ್ರಬಂಧಕ್ಕೆ ನಿಯಾಝ್ ಅವರಿಗೆ ಮಂಗಳೂರು ವಿ.ವಿ ಪಿಎಚ್.ಡಿ ನೀಡಿದೆ.
ನಿಯಾಝ್ ಪಣಕಜೆ ಅವರು ಪಣಕಜೆಯ ಇಬ್ರಾಹಿಂ ಹಾಗೂ ಝುಬೈರಾ ದಂಪತಿಗಳ ಪುತ್ರ. ಬಡ ಕುಟುಂದವರಾದ ಇವರು ತಮ್ಮ ವಿದ್ಯಾಭ್ಯಾಸಕ್ಕಾಗಿ ಮನೆಗೆಲಸ, ಮೇಸ್ತ್ರಿ ವೃತ್ತಿ, ಗದ್ದೆ-ತೋಟದ ಕೆಲಸ ಸಹಿತ ಎಲ್ಲಾ ವಿಧದ ಕೆಲಸವನ್ನು ಮಾಡಿದ್ದಾರೆ. ಅಲ್ಲದೇ ಇವರು ಮನೆ ಮನೆಗೆ ದಿನಪತ್ರಿಕೆಯನ್ನು ವಿತರಿಸುವ ಕೆಲಸವನ್ನೂ ಮಾಡಿದ್ದಾರೆ. ನಿಯಾಝ್ ಅವರು ಮಂಗಳೂರಿನ ಸೈಂಟ್ ಆಗ್ನೆಸ್ ಪಿಜಿ ಸೆಂಟರ್ನಲ್ಲಿ ಎಂಕಾಂ ಪದವಿ ಪೂರೈಸಿದ್ದಾರೆ.
ನಿಯಾಝ್ ಅವರು ಈಗಾಗಲೇ ಸುಮಾರು 55ಕ್ಕೂ ಅಧಿಕ ಸಂಶೋಧನಾತ್ಮಕ ಪ್ರಬಂಧಗಳನ್ನು ವಿವಿಧ ವಿಚಾರ ಸಂಕಿರಣಗಳಲ್ಲಿ ಮಂಡಿಸಿದ್ದಾರೆ.
2017ರಲ್ಲಿ ನಿಯಾಝ್ ಅವರು ಮೈಸೂರು ವಿ.ವಿಯಿಂದ ಕೆ-ಸೆಟ್ ಪೂರೈಸಿದ್ದಾರೆ.
ಪ್ರಸ್ತುತ ನಿಯಾಝ್ ಅವರು ಪಾಂಡೇಶ್ವರದ ಶ್ರೀನಿವಾಸ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿದ್ದಾರೆ. ನಿಯಾಝ್ ಅವರು ಕೂಲಿ ಕೆಲಸ ಮಾಡುವುದನ್ನು ಮಾತ್ರ ಮರೆತಿಲ್ಲ. ಹಿಂದೆ ಮಾಡುತ್ತಿದ್ದ ಕೆಲಸಗಳನ್ನು ಇಂದಿಗೂ ಮುಂದುವರಿಸಿದ್ದಾರೆ.