ಉಡುಪಿ, ಮಾ.01 (DaijiworldNews/PY): "ಹಿಂದುತ್ವ ಉಳಿಯಬೇಕಾದರೆ ಸಮಸ್ತ ಬ್ರಾಹ್ಮಣರು ಒಗ್ಗಟ್ಟಾಗಬೇಕು. ಲವ್ ಜಿಹಾದ್ ಪ್ರಕರಣದಲ್ಲಿ ಹೆಚ್ಚು ಬ್ರಾಹ್ಮಣ ಹೆಣ್ಣು ಮಕ್ಕಳೇ ಒಳಗಾಗಿದ್ದಾರೆ" ಎಂದು ರಾಜ್ಯ ಬ್ರಾಹ್ಮಣ ಅಭಿವೃದ್ದಿ ಮಂಡಳಿಯ ಅಧ್ಯಕ್ಷ ಸಚ್ಚಿದಾನಂದ ಮೂರ್ತಿ ಹೇಳಿದ್ದಾರೆ.

ಫೆ.28ರ ರವಿವಾರ ಜಿಲ್ಲಾ ಯುವ ಬ್ರಾಹ್ಮಣ ಪರಿಷತ್ ವತಿಯಿಂದ ಗುಂಡಿಬೈಲು ಹೊಸಬಾಕ್ಯಾರ್ ನಾಗಬನದ ಬಳಿ ನಡೆದ ಬ್ರಾಹ್ಮೀ ಸಭಾಭವನದ ಸಮರ್ಪಣೆ ಹಾಗೂ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು.
"ಸುಮಾರು 10,800 ಲವ್ ಜಿಹಾದ್ ಪ್ರಕರಣಗಳ ಪೈಕಿ 3,000ಕ್ಕೂ ಅಧಿಕ ಪ್ರಕರಣಗಳಲ್ಲಿ ಬ್ರಾಹ್ಮಣ ಹೆಣ್ಣುಮಕ್ಕಳೇ ಒಳಗಾಗಿದ್ದಾರೆ. ಈ ಪೈಕಿ ಹೆಚ್ಚಿನವು ಶಿರಸಿ ಹಾಘೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ನಡೆದಿವೆ. ಬ್ರಾಹ್ಮಣರಲ್ಲಿ 44 ಉಪಜಾತಿಗಳಿವೆ. ಇವರೆಲ್ಲರೂ ಒಗ್ಗೂಡಬೇಕಾಗಿದೆ. ಸಮಾಜದಲ್ಲಿ ಬ್ರಾಹ್ಮಣರ ಅವಹೇಳನ ಆಗಾಗ ನಡೆಯುತ್ತಿದ್ದು, ನಾವು ಇದರ ವಿರುದ್ದ ಸಂಘಟಿತರಾಗಬೇಕು. ನಮ್ಮ ಸಮುದಾಯವು, ಸಾಹಿತ್ಯ, ಸಿನೆಮಾ, ಸಾಮಾಜಿಕ ಮಾಧ್ಯಮಗಳ ಮೂಲಕ ಅಪಹಾಸ್ಯಕ್ಕೆ ಗುರಿಯಾಗುತ್ತಿದ್ದರೆ ನಾವು ಸಹಿಸುವುದಿಲ್ಲ. ಈ ರೀತಿಯಾಗುತ್ತಿರುವ ಸಂದರ್ಭ ನಾವು ಸುಮ್ಮನೆ ಕೂರುವುದಿಲ್ಲ" ಎಂದಿದ್ದಾರೆ.
"ಬ್ರಾಹ್ಮಣ ಅಭಿವೃದ್ದಿ ಮಂಡಳಿಗೆ 347 ಕೋಟಿ ರೂ.ಗಳ ಅನುದಾನವನ್ನು ಹಂಚಿಕೆ ಮಾಡುವುದಾಗಿ ರಾಜ್ಯ ಸರ್ಕಾರ ಭರವಸೆ ನೀಡಿದೆ" ಎಂದು ಹೇಳಿದ್ದಾರೆ.
ಕೃಷ್ಣಪುರ ಮಠದ ಶ್ರೀವಿದ್ಯಾಸಾಗರ ತೀರ್ಥರು ಆಶೀರ್ವಚನ ನೀಡಿ, "ಬ್ರಾಹ್ಮಣತ್ವ ಉಳಿಯಲು ಅನುಷ್ಠಾನಗಳು ಮುಖ್ಯ. ನಿಸ್ವಾರ್ಥದಿಂದ ಕೆಲಸ ಮಾಡಿದರೆ ಆತ್ಮಬಲ ವೃದ್ದಿಯಾಗುತ್ತದೆ. ಇದರೊಂದಿಗೆ ಸ್ವಾಭಾವಿಕ ಬಲವೂ ಕೂಡಾ ಗಟ್ಟಿಯಾಗಲಿದೆ" ಎಂದಿದ್ದಾರೆ.
ಪಲಿಮಾರು ಮಠದ ಶ್ರೀ ವಿದ್ಯಾಧೀಶ ತೀರ್ಥರು ಹಾಗೂ ಕಾಣಿಯೂರು ಮಠದ ಶ್ರೀ ವಿದ್ಯಾವಲ್ಲಭತೀರ್ಥರು ಮಾತನಾಡಿದರು. ಶಾಸಕ ಕೆ ರಘುಪತಿ ಭಟ್ ಅವರು ಅಧ್ಯಕ್ಷತೆ ವಹಿಸಿದ್ದರು.
ಕರ್ನಾಟಕ ಬ್ಯಾಂಕ್ ಸಿಇಒ ಹಾಗೂ ಎಂಡಿ ಎಂ.ಎಸ್ ಮಹಾಬಲೇಶ್ವರ, ಉದ್ಯಮಿ ವಿದ್ಯಾಪ್ರಸಾದ್, ಕೆ.ಆರ್. ದಿನೇಶ್, ಬೆಂಗಳೂರಿನ ಹರಿಕೃಷ್ಣ, ಉದ್ಯಮಿ ಶ್ರೀಕಾಂತ ಭಟ್ ಕೆಮ್ತೂರು, ಮೂಡುಬಿದಿರೆ ಶ್ರೀಪತಿ ಭಟ್, ಡಾ.ವಿ. ಅಶೋಕ್ ಕುಮಾರ್, ಪ್ರಸನ್ನ ಕುಮಾರ್ ರಾವ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.