ಮಂಗಳೂರು, ಮಾ. 01(DaijiworldNews/HR): ರಾಜ್ಯದಲ್ಲಿರುವ ವಿಕಲಚೇತನರಿಗೆ ಅಗತ್ಯ ಸೌಲಭ್ಯಗಳನ್ನು ಒದಗಿಸುವ ಹಿನ್ನಲೆಯಲ್ಲಿ ಸರಿಯಾದ ಅಂಕಿ ಅಂಶಗಳನ್ನು ಕಲೆ ಹಾಕುವುದಕ್ಕಾಗಿ ವಿಕಲಚೇತನರ ಪುನರ್ ಸರ್ವೇಗೆ ಸರಕಾರ ಚಿಂತನೆ ನಡೆಸುತ್ತಿದೆ ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.






ಈ ಕುರಿತು ಕುದ್ಮುಲ್ ರಂಗರಾವ್ ಪುರಭವನದಲ್ಲಿ ನಡೆದ ಮಹಾನಗರ ಪಾಲಿಕೆಯ ನಗರ ಬಡತನ ನಿರ್ಮೂಲನಾ ಕೋಶದಡಿ ವಿವಿಧ ಸವಲತ್ತುಗಳ ವಿತರಣಾ ಸಮಾರಂಭವನ್ನು ಉದ್ಘಾಟಿಸಿ ಬಳಿಕ ಮಾತನಾಡಿದ ಅವರು, "ವಿಕಲಚೇತನರಿಗೆ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ನಿಖರವಾದ ಸಂಖ್ಯೆಯನ್ನು ಪಡೆಯುವುದಕ್ಕಾಗಿ ಈ ಸರ್ವೇ ನಡೆಸಲು ತೀರ್ಮಾನಿಸಲಾಗಿದೆ" ಎಂದರು.
ಇನ್ನು ಕೆಲವು ನಗರ ಪ್ರದೇಶಗಳಲ್ಲಿ ಕೂಡ ಮನೆ, ಶೌಚಾಲಯ, ವಿದ್ಯುತ್ ಇಲ್ಲದಿರುವುದನ್ನು ಗುರುತಿಸಿ ಸಮಾಜದ ಕಟ್ಟಕಡೆಯ ಜನರಿಗೆ ಸೌಲಭ್ಯ ಒದಗಿಸುವುದು ಸರಕಾರದ ಜವಾಬ್ದಾರಿ ಅದಕ್ಕೆ ಒತ್ತು ನೀಡುವ ಕೆಲಸ ಮಾಡಲಾಗುತ್ತಿದೆ" ಎಂದಿದ್ದಾರೆ.
"ನಗರದಲ್ಲಿ ಸ್ಮಾರ್ಟ್ ಸಿಟಿ ಕಾಮಗಾರಿಯೂ ಅತ್ಯಂತ ವೇಗದಲ್ಲಿ ನಡೆಯುತ್ತಿದ್ದು, ಮೇಯರ್, ಉಪ ಮೇಯರ್, ಸ್ಥಾಯಿ ಸಮಿತಿಯ ಅವಧಿಯು ಕೊನೆಯ ದಿನವಾದ ಸೋಮವಾರ ಬಡತನ ನಿರ್ಮೂಲನಾ ಕೋಶದಡಿ ಸೌಲಭ್ಯಗಳನ್ನು ಒದಗಿಸುತ್ತಿರುವುದು" ಅಭಿನಂದನೀಯ ಎಂದರು.
ಇನ್ನು ಶೇ. 24.10ರ ಮೀಸಲು ನಿಧಿಯಡಿ 12 ಫಲಾನುಭವಿಗಳಿಗೆ ಒಟ್ಟು 4,11,216 ರೂ.ವಿತರಣೆ, ಶೇ. 7.25 ಮೀಸಲು ನಿದಿಯಡಿ 59 ಫಲಾನುಭವಿಗಳಿಗೆ 2,64,600 ರೂ.ಗಳ ಸವಲತ್ತುಗಳ ವಿತರಣೆ, ಶೇ. 5 ವಿಕಲಚೇತನ ಕಲ್ಯಾಣ ಕಾರ್ಯಕ್ರಮದಡಿ 688 ಮಂದಿಗೆ ಒಟ್ಟು 45,05,521 ರೂ. ಮೌಲ್ಯದ ವಿವಿಧ ಸಾಧನ, ಸಲಕರಣೆಗಳನ್ನು ಇಂದು ನಡೆದ ಕಾರ್ಯಕ್ರಮದಲ್ಲಿ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಶಾಸಕರಾದ ವೇದವ್ಯಾಸ ಕಾಮತ್, ಡಾ.ಭರತ್ ಶೆಟ್ಟಿ, ಮೇಯರ್ ದಿವಾಕರ ಪಾಂಡೇಶ್ವರ, ಉಪ ಮೇಯರ್ ವೇದಾವತಿ, ಮುಖ್ಯ ಸಚೇತಕ ಪ್ರೇಮಾನಂದ ಶೆಟ್ಟಿ ಹಾಗೂ ಮತ್ತಿತರರು ಉಪಸ್ಥಿತರಿದ್ದರು.