ಬೈಂದೂರು, ಜು 24 : ಸರ್ಕಾರದ ಯೋಜನೆಗಳು ಜನರ ಬದುಕಿಗೆ ಪೂರಕವಾಗಬೇಕೇ ಹೊರತು ಮಾರಕವಾಗಬಾರದು. ಕಿರಿಮಂಜೇಶ್ವರದ ಅಗಸ್ತ್ಯೇಶ್ವರ ದಲಿತ ಕಾಲನಿ ಬಳಿ ನಿರ್ಮಾಣ ಮಾಡುತ್ತಿರುವ ಹೆದ್ದಾರಿ ಅಂಡರ್ ಪಾಸ್ ಜನ ವಿರೋಧಿ ಮತ್ತು ದಲಿತ ವಿರೋಧಿಯಾಗಿದೆ. ಇದನ್ನು ತಕ್ಷಣ ನಿಲುಗಡೆಗೊಳಿಸಿ, ಸೂಕ್ತ ಸ್ಥಳಕ್ಕೆ ಅದನ್ನು ವರ್ಗಾಯಿಸಬೇಕು ಎಂದು ದಲಿತ ನಾಯಕ ಜಯನ್ ಮಲ್ಪೆ ಆಗ್ರಹಿಸಿದರು.
ಅಂಡರ್ ಪಾಸ್ ಕಾಮಗಾರಿ ಮುಂದುವರಿಕೆ ವಿರೋಧಿಸಿ ರಾಜ್ಯ ದಲಿತ ಸಂಘರ್ಷ ಸಮಿತಿಯ ಬೈಂದೂರು ತಾಲ್ಲೂಕು ಸಮಿತಿ ಬುಧವಾರ ನಡೆಸಿದ ಪ್ರತಿಭಟನೆ ಸಂದರ್ಭ ಅವರು ಮಾತನಾಡಿದರು.
ಈಗ ಅಂಡರ್ ಪಾಸ್ ನಿರ್ಮಿಸುತ್ತಿರುವಲ್ಲಿ ವಿರಳ ಜನ ಮತ್ತು ವಾಹನ ಸಂಚಾರವಿದೆ. ಇದು ಸಾರ್ವಜನಿಕರಿಗೆ ಪ್ರೋಜನಕಾರಿಯಲ್ಲ. ಆದರೆ ಇದು ದಲಿತ ಕಾಲನಿಯನ್ನು ವಿಭಜಿಸುತ್ತದೆ. ಇಲ್ಲಿರುವ ದಲಿತರ ಆರಾಧನಾ ಕೇಂದ್ರಕ್ಕೂ ತೊಂದರೆಯಾಗುತ್ತದೆ.ಇದರ ವಿರುದ್ಧ ಹಿಂದೆ ಪ್ರತಿಭಟನೆ ನಡೆಸಿದುದಲ್ಲದೆಜನ ಪ್ರತಿನಿಧಿಗಳಿಗೆ ಜಿಲ್ಲಾಧಿಕಾರಿಗಳಿಗೆ ಮನವಿ ನೀಡಲಾಗಿತ್ತು. ಜಿಲ್ಲಾಧಿಕಾರಿಗಳ ದಲಿತರ ಬೇಡಿಕೆಯನ್ನು ಮನ್ನಿಸಿ, ಕಾಮಗಾರಿಯನ್ನು ಬೇರೆಡೆಗೆ ಸ್ಥಳಾಂತರಿಸುವಂತೆ ಹೆದ್ದಾರಿ ಪ್ರಾಧಿಕಾರಕ್ಕೆ ಪತ್ರ ಬರೆದಿದ್ದರು. ಅದರಂತೆ ಎರಡು ವರ್ಷಗಳಿಂದ ಕಾಮಗಾರಿ ಸ್ಥಗಿತವಾಗಿತ್ತು. ಆದರೆ ಸೋಮವಾರ ಯಾವುದೇ ಮುನ್ಸೂಚನೆ ಕೊಡದೆ ಏಕಾಏಕಿ ಪೊಲೀಸ್ ಬಂದೋಬಸ್ತ್ನಲ್ಲಿ ಕಾಮಗಾರಿ ಪುನರಾರಂಭಿಸಲಾಗಿದೆ. ಅದನ್ನು ವಿರೋಧಿಸಿ ಇಂದು ಸಾಂಕೇತಿಕ ಪ್ರತಿಭಟನೆ ನಡೆಸಿದ್ದೇವೆ. ಬೇಡಿಕೆ ಈಡೇರದಿದ್ದರೆ ಪ್ರಬಲ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.
ದಲಿತ ನಾಯಕ, ವಕೀಲ ಮಂಜುನಾಥ ಗಿಳಿಯಾರು ಮಾತನಾಡಿ ಗುತ್ತಿಗೆದಾರರು ಇಲ್ಲಿ ಈಗಾಗಲೆ 8 ಲಕ್ಷ ಮೌಲ್ಯದ ಕಾಮಗಾರಿ ನಡೆದಿದೆ. ಬದಲಾಯಿಸಿದರೆ ನಷ್ಟವಾಗುತ್ತದೆ ಎಂದು ವಾದಿಸುತ್ತಿದ್ದಾರೆ. ನಮಗೆ ಹೇಳಿದ್ದರೆ ನಾವು ಅಂಗಾಂಗ ಮಾರಾಟಮಾಡಿ, ಭಿಕ್ಷೆ ಬೇಡಿ, ಅಥವಾ ವಂತಿಗೆ ಸಂಗ್ರಹಿಸಿ ನಷ್ಟ ಭರ್ತಿಮಾಡಿಕೊಡುತ್ತಿದ್ದೆವು. ಪೂರ್ವ ಸೂಚನೆ ಇಲ್ಲದೆ ತರಾತುರಿಯಲ್ಲಿ ಕಾಮಗಾರಿ ನಡೆಸುವ ಮೂಲಕ ಆಡಳಿತ ದಲಿತ ದಮನ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿದರು.
ಸಮಿತಿಯ ಜಿಲ್ಲಾ ಸಂಚಾಲಕ ನಾರಾಯಣ ರಾವ್, ಮುಖಂಡರಾದ ವಾಸುದೇವ ಮುದೂರು, ರಾಜು ಬೆಟ್ಟಿನಮನೆ ಕೂಡ ಮಾತನಾಡಿದರು. ಆ ಬಳಿಕ ಕಾಮಗಾರಿಯನ್ನು ಖಂಡಿಸುವ ಅದನ್ನು ಸ್ಥಳಾಂತರಿಸಬೇಕು ಎಂದು ಜಿಲ್ಲಾಧಿಕರಿಗಳನ್ನು ಆಗ್ರಹಿಸುವ ಮನವಿಯನ್ನು ಹಾಜರಿದ್ದ ಬೈಂದೂರು ತಹಶೀಲ್ದಾರ್ ಕಿರಣ್ ಗೌರಯ್ಯ ಅವರಿಗೆ ನೀಡಿದರು. ಸಮಿತಿಯ ಪ್ರಮುಖರಾದ ಪ್ರಭಾಕರ ವಿ, ಗೀತಾ, ಸುರೇಶಕುಮಾರ್, ಮಂಜುನಾಥ ಹಳಗೇರಿ, ಚಂದ್ರ ಹಳಗೇರಿ, ಕರುಣಾಕರ ಕೆ, ಕೆ. ರಾಮಚಂದ್ರ, ಭಾಸ್ಕರ, ಮಂಜುನಾಥ ನಾಗೂರು, ರಮೇಶ ಮರವಂತೆ ಇದ್ದರು. ನಿನ್ನೆಯಂತೆ ಇಂದು ಕೂಡ ಕುಂದಾಪುರ ಡಿವೈಎಸ್ಪಿ ದಿನೇಶಕುಮಾರ್, ಬೈಂದೂರು ವೃತ್ತ ನಿರೀಕ್ಷಕಪರಮೇಶ್ವರ ಗುನಗ, ಕುಂದಾಪುರ ವೃತ್ತ ನಿರೀಕ್ಷಕ ಮಂಜಪ್ಪ ಡಿ. ಆರ್, ಬೈಂದೂರು ಎಸ್ಐ ತಿಮ್ಮೇಶ್ ಬಿ. ಎನ್, ಗಂಗೊಳ್ಳಿ ಎಸ್ಐ ವಿನಾಯಕ ಬಿಲ್ಲವ ಅವರ ನೇತೃತ್ವದಲ್ಲಿ ಬಿಗು ಬಂದೋಬಸ್ತ್ ಮುಂದುವರಿಸಲಾಗಿತ್ತು. ಹೆದ್ದಾರಿ ಪ್ರಾಧಿಕಾರದ ನಿರ್ದೇಶಕ ಸೈಮನ್ ವಿಜಯನ್, ಸೈಟ್ ಇಂಜಿನಿಯರ್ ನವೀನ್, ಐಆರ್ಬಿ ಕಂಪನಿಯ ಮೋಹನದಾಸ್ ಅವರ ನೇತೃತ್ವದಲ್ಲಿ ನಿನ್ನೆಯಿಂದ ಅಹರ್ನಿಶಿ ಕಾಮಗಾರಿ ನಡೆಯುತ್ತಿದೆ. ಪೊಲೀಸ್ ಬಂದೋಬಸ್ತ್ ಮುಂದುವರಿಸಲಾಗಿದೆ.