ಕಾಸರಗೋಡು, ಮಾ.03 (DaijiworldNews/MB) : ಕಾರಿನಲ್ಲಿ ಪ್ರಯಾಣಿಸುತ್ತಿದ್ದವರ ಮೇಲೆ ದಾಳಿ ನಡೆಸಿದ ಆರು ಜನರ ತಂಡವೊಂದು ಮಹಿಳೆ ಸೇರಿ ಇಬ್ಬರನ್ನು ಅಪಹರಣ ಮಾಡಿರುವ ಘಟನೆ ಮಾರ್ಚ್ 2 ರ ಮಂಗಳವಾರ ನಗರದ ಹೊಸ ಬಸ್ ನಿಲ್ದಾಣದ ಬಳಿ ನಡೆದಿದೆ.

ತಂಡವು ಕಾರಿನಲ್ಲಿದ್ದ ಯುವತಿ ಹಾಗೂ ಇನ್ನೋರ್ವ ವ್ಯಕ್ತಿಯನ್ನು ಬಲವಂತವಾಗಿ ಎಳೆದೊಯ್ದು ಅಪಹರಣ ಮಾಡಿರುವುದು ಮಾತ್ರವಲ್ಲದೇ ಕಾರಿನಲ್ಲಿದ್ದ ಇತರರ ಮೇಲೆ ಹಲ್ಲೆ ನಡೆಸಿದೆ ಎಂದು ವರದಿಯಾಗಿದೆ.
ಮಾಣಿಕೋತ್ತ್ ನಿವಾಸಿ ಅಬ್ದುಲ್ ಲತೀಫ್ ಮತ್ತು ಶೌಕತ್ ಅಲಿ ಮಂಗಳೂರಿಗೆ ಬಂದು ಅಲ್ಲಿಂದ ತಮಿಳುನಾಡು ಮೂಲದ ಮಹಿಳೆಯೊಂದಿಗೆ ಕಾರಿನಲ್ಲಿ ವಾಪಾಸು ತೆರಳುತ್ತಿದ್ದರು. ಈ ವೇಳೆ ಆರು ಜನರ ತಂಡ ಕಾರಿನಲ್ಲಿದ್ದವರ ಮೇಲೆ ಹಲ್ಲೆ ನಡೆಸಿ ಮಹಿಳೆ ಮತ್ತು ವ್ಯಕ್ತಿಯನ್ನು ಅಪಹರಿಸಿದ್ದಾರೆ ಎಂದು ವರದಿಯಾಗಿದೆ.
ಪೊಲೀಸರು ಆರು ಜನರ ವಿರುದ್ಧ ಅಪಹರಣ ಪ್ರಕರಣವನ್ನು ದಾಖಲಿಸಿದ್ದಾರೆ.