ಬಂಟ್ವಾಳ, ಜು 24: ಮೂಲರುಪಟ್ನ ಸೇತುವೆ ಕುಸಿಯಲು ಸ್ಥಳೀಯ ಶಾಸಕರ ಬೆಂಬಲಿಗರೇ ಕಾರಣ ಎಂದು ಬಂಟ್ವಾಳ ಕಾಂಗ್ರೆಸ್ ಮುಖಂಡ ಜಗದೀಶ್ ಕೊಯಿಲ ಆರೋಪಿಸಿದ್ದಾರೆ. ಮಂಗಳೂರಿನ ಕಾಂಗ್ರೆಸ್ ಕಚೇರಿಯಲ್ಲಿ ಮಾತನಾಡಿದ ಅವರು ಮಂಗಳೂರು-ಬಂಟ್ವಾಳ ಸಂಪರ್ಕಿಸುವ ಮೂಲರಪಟ್ನ ಸೇತುವೆ ಕುಸಿತಕ್ಕೆ ಬಿಜೆಪಿ ನಾಯಕರ ಬೆಂಬಲಿಗರು ನಡೆಸುತ್ತಿರುವ ಅಕ್ರಮ ಮರಳುಗಾರಿಕೆಯೇ ಕಾರಣ.
ಆದರೆ ಕಾಂಗ್ರೆಸ್ ವಿರುದ್ಧ ವಿನಾ ಕಾರಣ ಆರೋಪ ನಡೆಸಲಾಗುತ್ತಿದೆ. ಆಸುಪಾಸು ನಡೆಯುವ ಅಕ್ರಮ ಮರಳುಗಾರಿಕೆಯಲ್ಲಿ ಕ್ಷೇತ್ರ ಶಾಸಕರ ಹಿಂಬಾಲಕರ ಕೈವಾಡ ಇದೆ ಎಂದು ಆರೋಪಿಸಿದ್ದಾರೆ. ಸೇತುವೆ ಕುಸಿಯಲು ಕಾಂಗ್ರೆಸ್ ಕಾರಣ ಎಂದು ಮಾಜಿ ಸಚಿವರನ್ನು ದೂಷಿಸಲಾಗುತ್ತಿದೆ. ಈ ಸೇತುವೆ ಕುಸಿಯಲು ನೇರ ಹೊಣೆಯನ್ನು ಬಂಟ್ವಾಳದ ಎಸ್ಇಝೆಡ್ ಅಧಿಕಾರಿ ಗೋವಿಂದ ಪೈ ವಹಿಸಿಕೊಳ್ಳಬೇಕು. ಪೈಪ್ಲೈನ್ ಹೆಸರಿನಲ್ಲಿ ಡ್ರೆಜ್ಜಿಂಗ್ ಮೂಲಕ ಅಧಿಕಾರಿಗಳು ಇಲ್ಲಿಂದ ನೇರವಾಗಿ ಮರಳು ಸಾಗಾಟ ಮಾಡುತ್ತಿದ್ದಾರೆ ಎಂದರು. ಸೇತುವೆ ಕುಸಿಯಲು ಕಾರಣವಾದ ವಿಚಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಸೂಕ್ತ ತನಿಖೆಗೆ ಒತ್ತಾಯಿಸುತ್ತದೆ ಎಂದರು.