ಮಂಗಳೂರು, ಜು 24: ದಕ್ಷಿಣ ಕನ್ನಡ ಜಿಲ್ಲಾ ಸಾರಿಗೆ ಪ್ರಾಧಿಕಾರದ ಅನುಮತಿಯಿಲ್ಲದೆ ಅನಧಿಕೃತವಾಗಿ ಖಾಸಗಿ ಬಸ್ಗಳಲ್ಲಿ ಪ್ರಯಾಣ ದರ ಹೆಚ್ಚು ಮಾಡಿರುವ ಜಿಲ್ಲಾ ಬಸ್ ಮಾಲಕರ ಸಂಘಕ್ಕೆ ಪ್ರಾಧಿಕಾರದ ಅಧ್ಯಕ್ಷ, ಜಿಲ್ಲಾಧಿಕಾರಿಯೂ ಆಗಿರುವ ಸಸಿಕಾಂತ್ ಸೆಂಥಿಲ್ ಬಸ್ ಪ್ರಯಾಣ ದರವನ್ನು ಕೂಡಲೇ ಇಳಿಕೆ ಮಾಡಬೇಕೆಂದು ಆದೇಶ ನೀಡಿದ್ದಾರೆ ಎಂದು ಇಲಾಖೆ ಪ್ರಭಾರ ಉಪಾಯುಕ್ತ ಜಾನ್ ಮಿಸ್ಕಿತ್ ಸ್ಪಷ್ಟಪಡಿಸಿದ್ದಾರೆ.
ಮಂಗಳೂರು ಸಾರಿಗೆ ಇಲಾಖೆಯ ಕಚೇರಿಯಲ್ಲಿ ನಡೆದ ಜನಸಂಪರ್ಕ ಸಭೆಯಲ್ಲಿ ಮಾತನಾಡಿದ ಮಿಸ್ಕಿತ್, ಸಾರಿಗೆ ಪ್ರಾಧಿಕಾರದ ಒಪ್ಪಿಗೆ ಇಲ್ಲದೆ ಯಾರೂ ಕೂಡಾ ದರವನ್ನು ಏರಿಕೆ ಮಾಡಲು ಸಾಧ್ಯವಿಲ್ಲ. ಬಸ್ ಮಾಲಕರು ಏರಿಕೆ ಮಾಡಿರುವ ಈ ಕ್ರಮ ಕಾನೂನು ಬಾಹಿರವಾಗಿದೆ. ಅಧಿಕ ದರ ವಸೂಲಿ ಮಾಡುವ ಬಸ್ಸು ನಿರ್ವಾಹಕರ, ಮಾಲಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು. ಸಾರ್ವಜನಿಕರಿಂದ ದೂರು ಬಂದ ಹಿನ್ನಲೆಯಲ್ಲಿ ಸಾರಿಗೆ ಇಲಾಖೆಯು ಈ ವಿಚಾರವನ್ನು ಜಿಲ್ಲಾಧಿಕಾರಿಯವರ ಗಮನಕ್ಕೆ ತಂದಿತ್ತು. ಅದರಂತೆ ಜಿಲ್ಲಾಧಿಕಾರಿ ಸಂಘಕ್ಕೆ ನೋಟಿಸ್ ಜಾರಿಗೊಳಿಸಿದ್ದಾರೆ ಎಂದರು. ಈ ಆದೇಶದ ವಿರುದ್ಧ ಬಸ್ಸು ಮಾಲಕರ ಸಂಘವು ಸಾರಿಗೆ ಪ್ರಾಧಿಕಾರ ಕೆಎಸ್ಟಿಎಟಿಗೆ ಮೇಲ್ಮನವಿ ಸಲ್ಲಿಸಿತ್ತು. ಅದರಂತೆ ರಾಜ್ಯ ಸಾರಿಗೆ ಪ್ರಾಧಿಕಾರವು ಜಿಲ್ಲಾ ಸಾರಿಗೆ ಪ್ರಾಧಿಕಾರದಿಂದ ಸ್ಪಷ್ಟನೆ ಬಯಸಿದೆ. ಸಂಘವು ಏಕಪಕ್ಷೀಯವಾಗಿ ಕೈಗೊಂಡ ತೀರ್ಮಾನವನ್ನು ರದ್ದುಗೊಳಿಸಿ ಆದೇಶಿಸಿದೆ ಎಂದು ಜಿಲ್ಲಾ ಸಾರಿಗೆ ಪ್ರಾಧಿಕಾರ ಸ್ಪಷ್ಟಪಡಿಸಿದೆ.