ಬೈಂದೂರು, ಮಾ.03 (DaijiworldNews/MB) : ಬೈಂದೂರು ಪಟ್ಟಣ ಪಂಚಾಯತ್ ರಚನೆಯಾಗಿ ಹಲವು ತಿಂಗಳುಗಳು ಕಳೆದು ಹೋದರೂ ಕೂಡಾ ಇನ್ನೂ ಪೂರ್ಣ ಪ್ರಮಾಣದಲ್ಲಿ ಕಾರ್ಯನಿರ್ವಹಣೆ ಆಗುತ್ತಿಲ್ಲ. ಗ್ರಾಮ ಪಂಚಾಯತಿ ಪಟ್ಟಣ ಪಂಚಾಯತಿಯಾಗಿ ಮೇಲ್ಬಡ್ತಿ ಹೊಂದಿದ್ದರೂ ಕೂಡಾ ಸಾರ್ವಜನಿಕರಿಗೆ ಸಿಗುವ ಸವಲತ್ತುಗಳು, ಅಭಿವೃದ್ದಿ ಕಾರ್ಯಗಳಿಗೆ ತಡೆಯಾಗಿದೆ. ತಾಂತ್ರಿಕ ಅಡಚಣೆಗಳು ಕಾಡುತ್ತಿವೆ ಎನ್ನುವ ಸಾರ್ವಜನಿಕರ ಅಸಮಾಧಾನಗಳು ಕೇಳಿ ಬರುತ್ತಿರುವ ಹಿನ್ನೆಲೆಯಲ್ಲಿ ಬುಧವಾರ ಕೊಲ್ಲೂರಿನಲ್ಲಿ ಶಾಸಕ ಬಿ.ಎಂ.ಸುಕುಮಾರ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ಪಟ್ಟಣ ಪಂಚಾಯತಿ ಅಭಿವೃದ್ದಿ ಬಗ್ಗೆ ಸಭೆ ನಡೆಯಿತು.










ಸಭೆಯಲ್ಲಿ ಸಂಸದರು ಪಟ್ಟಣ ಪಂಚಾಯತಿ ಬಗ್ಗೆ ಹಿನ್ನೆಡೆಯ ಕುರಿತು ಅಧಿಕಾರಿಗಳನ್ನು ತೀವ್ರ ತರಾಟೆಗೆ ತಗೆದುಕೊಂಡರು. ಆರು ತಿಂಗಳಾದರೂ ಪೈಲ್ಗಳು ಪೆಂಡಿಂಗ್ ಇರಲು ಕಾರಣವೇನು? ತ್ವರಿತವಾಗಿ ಸಮಸ್ಯೆ ಪರಿಹರಿಸಿಕೊಳ್ಳಲು ಆಗಿಲ್ಲವೇಕೆ ಎಂದು ಗದರಿದರು. ಪಟ್ಟಣ ಪಂಚಾಯತಿಯ ವಿಚಾರದಲ್ಲಿ ಆಡಳಿತಾತ್ಮಕವಾದ ಸಮಸ್ಯೆಗಳನ್ನು ಕೂಡಲೇ ಸರಿಪಡಿಸಿಕೊಳ್ಳಿ. ಇಲ್ಲದಿದ್ದರೆ ಜನಸಾಮಾನ್ಯರಿಗೆ ಸಮಸ್ಯೆಯಾಗುತ್ತದೆ. ಸರ್ಕಾರಿ ಸೌಲಭ್ಯ ಪಡೆಯಲು ಕಷ್ಟವಾಗುತ್ತದೆ. ಗ್ರಾಮ ಪಂಚಾಯತ್ ಪಟ್ಟಣ ಪಂಚಾಯತ್ ಆಗಿ ಆರು ತಿಂಗಳು ಕಳೆದಿದ್ದರೂ ಕೂಡಾ ಜನಸಮಾನ್ಯರಿಗೆ ಅನುಕೂಲತೆ ಕಲ್ಪಿಸಿಕೊಡದಿದ್ದೆ ಪಟ್ಟಣ ಪಂಚಾಯತಿ ಆಗಿಯೂ ಏನು ಪ್ರಯೋಜನ ಎಂದು ಪ್ರಶ್ನಿಸಿದರು.
ಬೈಂದೂರಿನಲ್ಲಿ ಹಿಂದೂ ರುದ್ರಭೂಮಿ ನಿರ್ಮಾಣಕ್ಕೆ 5.56 ಸೆಂಟ್ಸ್ ಜಾಗವಿದೆ. ಅಲ್ಲಿ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿಕೊಡಬೇಕು. ಒಂದು ಶೆಲ್ಟರ್ ವ್ಯವಸ್ಥೆ ಆಗಬೇಕು. ಸಶ್ಮಾನಕ್ಕೆ ಹೋದರೆ ದೇವಸ್ಥಾನಕ್ಕೆ ಹೋದ ಅನುಭವ ಆಗಬೇಕು. ಆ ರೀತಿಯಲ್ಲಿ ಅಭಿವೃದ್ದಿ ಗೊಳಿಸಿ ಎಂದರು ಸೂಚಿಸಿದರು.
ಬೈಂದೂರು ಪಟ್ಟಣ ಪಂಚಾಯತಿ ವ್ಯಾಪ್ತಿಯಲ್ಲಿ ಕಸವಿಲೇವಾರಿಗೆ ಸೂಕ್ತ ಜಾಗ ಕಾಯ್ದಿರಿಸಲಾಗಿದೆ. ಒಟ್ಟಾರೆಯಾಗಿ ಬೈಂದೂರು ಪಟ್ಟಣ ಪಂಚಾಯತಿಯ ಸಮಗ್ರ ಅಬಿವೃದ್ದಿಗೆ ಕ್ರಮ ಕೈಗೊಳ್ಳಬೇಕು. ಅಧಿಕಾರಿಗಳು ಉತ್ಸಾಹದಿಂದ ಕೆಲಸ ಮಾಡಬೇಕು ಎಂದರು.
ಕೊಲ್ಲೂರು ರಿಂಗ್ ರೋಡ್
ಬೆಳೆಯುತ್ತಿರುವ ಕೊಲ್ಲೂರಿನ ಜನ ದಟ್ಟಣಿ ಹಾಗೂ ವಾಹನ ದಟ್ಟಣಿಯನ್ನು ನಿಯಂತ್ರಿಸಲು ರಿಂಗ್ ರಸ್ತೆ ನಿರ್ಮಾಣಕ್ಕೆ ಮುಂದಾಗಲಾಗಿದ್ದು ಈ ಬಗ್ಗೆ ಭೂಸ್ವಾಧೀನ ಪ್ರಕ್ರಿಯೆ, ಕಾಮಗಾರಿ ಅನುಷ್ಠಾನ ಕೂಡಲೇ ಆರಂಭಿಸುವಂತೆ ಸಂದರು ಸೂಚಿಸಿದರು.
94ಸಿ ಆರಂಭವಾಗಿ ಐದು ವರ್ಷ ಆಯಿತು. ಆದರೆ ಇನ್ನೂ ಕೂಡಾ ಅನೇಕ ಕುಟುಂಬಗಳಿಗೆ ಹಕ್ಕು ಪತ್ರ ಸಿಕ್ಕಿಲ್ಲ. ಎಸಿಯವರು ಈ ಬಗ್ಗೆ ಗಮನ ಹರಿಸುವಂತೆ ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಜಿ.ಜಗದೀಶ, ಸಹಾಯಕ ಕಮಿಷನರ್ ಕೆ.ರಾಜು, ಜಿ.ಪಂ.ಸದಸ್ಯರಾದ ಶಂಕರ ಪೂಜಾರಿ, ಬಾಬು ಶೆಟ್ಟಿ, ರೋಹಿತ್ ಕುಮಾರ ಶೆಟ್ಟಿ ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.
ಹೆದ್ದಾರಿ ಸಮಸ್ಯೆ ಸರಿಪಡಿಸಲು ಸೂಚನೆ
ಕುಂದಾಪುರದಿಂದ ಶಿರೂರು ತನಕ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಮಸ್ಯೆಗಳಿರುವ ಬಗ್ಗೆ ಪತ್ರಿಕೆಗಳಲ್ಲಿ ವರದಿಯಾಗುತ್ತಲೇ ಇದೆ. ಎನ್.ಎಚ್.ಐ ಅಧಿಕಾರಿಗಳು ಕೂಡಲೇ ಈ ಬಗೆ ಗಮನ ಹರಿಸಿ ಸಮಸ್ಯೆ ಸರಿಪಡಿಸಿ ಎಂದು ಹೆದ್ದಾರಿ ಅಧಿಕಾರಿಗಳಿಗೆ ಸೂಚನೆ ನೀಡಿದ ಸಂಸದರು, ಕುಂದಾಪುರ ಸರ್ಕಾರಿ ಬಸ್ ನಿಲ್ದಾಣದ ಹತ್ತಿರ ಜಂಕ್ಷನ್, ಸಂಗಮ್ನಲ್ಲಿ ಸರ್ವಿಸ್ ರಸ್ತೆ ನಿರ್ಮಾಣ, ಶೆಲ್ಟರ್ ನಿರ್ಮಾಣ, ತಲ್ಲೂರಿನಲ್ಲ್ಲಿ ವ್ಯವಸ್ಥಿತ ಜಕ್ಷನ್, ಸರ್ವೀಸ್ ರಸ್ತೆ, ಹೆಮ್ಮಾಡಿಯ ಜಾಲಾಡಿಯಲ್ಲಿ ಸಾರ್ವಜನಿಕರ ಸಂಪರ್ಕಕ್ಕೆ ಅನುಕೂಲ ರೀತಿಯಲ್ಲಿ ಕ್ರಾಸಿಂಗ್ ವ್ಯವಸ್ಥೆ, ಮುಳ್ಳಿಕಟ್ಟೆಯಲ್ಲಿ ಸರ್ವೀಸ್ ರಸ್ತೆ, ತ್ರಾಸಿಯಲ್ಲಿ ಸರ್ವಿಸ್ ರಸ್ತೆ, ಬಸ್ ನಿಲ್ದಾಣ, ಮರವಂತೆಯಲ್ಲಿ ಪ್ರವಾಸೋಧ್ಯಮವನ್ನು ಗಮನದಲ್ಲಿಟ್ಟುಕೊಂಡು ಪುಟ್ಪಾತ್ ರಚನೆ, ದಾರಿದೀಪ, ನಾವುಂದದಲ್ಲಿ ಸರ್ವೀಸ್ ರಸ್ತೆ, ಬೈಂದೂರು ಹೊಸ ಬಸ್ ನಿಲ್ದಾಣದ ಹತ್ತಿರ ಕ್ರಾಸಿಂಗ್ ಹೀಗೆ ಸಾರ್ವಜನಿಕರ ಬೇಡಿಕೆಗಳನ್ನು ಈಡೇರಿಸಿ, ರೈತರ ಕ್ರಷಿ ಭೂಮಿಗೆ ನೀರು ಹೋಗುತ್ತದೆ ಎನ್ನುವ ದೂರು ಕೂಡಾ ಇದೆ. ಈ ಸಮಸ್ಯೆ ಸರಿ ಪಡಿಸಿ ಎಂದು ಸೂಚಿಸಿದರು. ಡ್ರೈನೇಜ್ ನೀರು ಹೋಗಲು ವ್ಯವಸ್ಥೆ ಇಲ್ಲ ಎನ್ನುವ ಸಾರ್ವಜನಿಕ ದೂರುಗಳು ಬರುತ್ತಿರುವ ಹಿನ್ನೆಲೆಯಲ್ಲಿ ಈ ಬಗ್ಗೆ ಗಮನ ಹರಿಸಿ ಕೆಲಸ ಮಾಡಿ ಎಂದು ಹೇಳಿದರು.
ನೀವೇನು ಕತ್ತೆ ಕಾಯ್ತಿದ್ದೀರಾ?
ಜನರಿಗೆ ಅನುಕೂಲವಾಗಲಿ ಎಂದು ಪಟ್ಟಣ ಪಂಚಾಯತ್ ರಚನೆ ಮಾಡಿದರೆ ಅದನ್ನು ಸರಿಯಾಗಿ ಕಾರ್ಯರೂಪಕ್ಕೆ ತರಲು ಸಮಸ್ಯೆಗಳನ್ನು ಪರಿಹರಿಸಲು ಆರು ತಿಂಗಳಿಂದ ಆಗಿಲ್ಲ ಎಂದರೆ ನೀವೇನು ಕತ್ತೆ ಕಾಯ್ತಿದ್ದೀರಾ ಎಂದು ಸಂಸದರು ಸಂಬಂಧಪಟ್ಟ ಅಧಿಕಾರಿಯನ್ನು ತೀವ್ರ ತರಾಟೆಗೆ ತಗೆದುಕೊಂಡರು. ಪೈಲ್ಗಳು ಏಕೆ ಪೆಂಡಿಂಗ್ ಇರಿಸಿಕೊಂಡಿದ್ದಿರಿ. ಇದರಿಂದ ಜನಸಾಮಾನ್ಯರಿಗೆ ಸಮಸ್ಯೆಯಾಗುತ್ತದೆ. 69 ಪೈಲ್ ಬಾಕಿ ಇದೆ. ಅದಷ್ಟು ಬೇಗ ಎಲ್ಲಾ ಸರಿ ಪಡಿಸಿಕೊಳ್ಳಿ ಎಂದು ಅಧಿಕಾರಿಗೆ ಗದರಿದರು.