ಕಡಬ, ಮಾ. 03 (DaijiworldNews/SM): ಕಳೆದ ಕೆಲ ದಿನಗಳ ಹಿಂದೆ ರಾಜ್ಯಾದ್ಯಂತ ಸುದ್ದಿಯಾಗಿದ್ದ ಐತ್ತೂರು ರಕ್ಷಿತಾರಣ್ಯದ ಮರ ಲೂಟಿ ಪ್ರಕರಣಕ್ಕೆ ಈಗ ಹೊಸ ತಿರುವು ಸಿಕ್ಕಿದೆ. ಮರ ಲೂಟಿ ವಿರುದ್ಧ ದೂರು ನೀಡಿದ ವ್ಯಕ್ತಿಯ ಮನೆಗೆ ದಾಳಿ ನಡೆಸಿರುವ ಅರಣ್ಯ ಸಂಚಾರಿ ದಳದ ಅಧಿಕಾರಿಗಳು ಮನೆಯಲ್ಲಿ ದಾಂಧಲೆ ನಡೆಸಿದ್ದಾರೆ ಎಂದು ಹೇಳಲಾಗಿರುವ ವೀಡಿಯೋ ಈಗ ವೈರಲಾಗುತ್ತಿದೆ.

ದೂರುದಾರ ಐತ್ತೂರು ಗ್ರಾಮದ ಮೂಜೂರು ಪ್ರಸಾದ್ ಎಂಬವರ ಮನೆಗೆ ಅರಣ್ಯ ಸಂಚಾರಿ ದಳದ ಅಧಿಕಾರಿ ಸಂಧ್ಯಾ ನೇತೃತ್ವದ ಅಧಿಕಾರಿಗಳ ತಂಡ ರಾತ್ರೋ ರಾತ್ರಿ ನುಗ್ಗಿ ದಾಳಿ ಹೆಸರಲ್ಲಿ ದಾಂಧಲೆ ನಡೆಸಿದ್ದಾರೆ ಎಂದು ಮನೆ ಮಂದಿ ಆರೋಪಿಸಿದ್ದಾರೆ. ಕಡಬ ತಾಲೂಕಿನ ಸಬ್ರಹ್ಮಣ್ಯ ಅರಣ್ಯ ವಲಯದ ಐತ್ತೂರು ಗ್ರಾಮದ ರಕ್ಷಿತಾರಣ್ಯದಿಂದ ಕೋಟ್ಯಾಂತರ ರೂ. ಮೌಲ್ಯದ ಮರಗಳನ್ನು ಲೂಟಿ ಮಾಡಲಾಗಿದೆ. ಇದರಲ್ಲಿ ಸ್ಥಳೀಯ ಅರಣ್ಯಾಧಿಕಾರಿಗಳು ಭಾಗಿಯಾಗಿದ್ದಾರೆ ಎಂದು ಪ್ರಸಾದ್ ಅವರು ಅರಣ್ಯ ಸಚಿವಾಲಯಕ್ಕೆ ದೂರು ನೀಡಿದ್ದರು.
ಭಾರೀ ಗಾತ್ರದ ಬೆಲೆ ಬಾಳುವ ಮರಗಳ ಬುಡಗಳನ್ನು ತೋರಿಸಿ ದೂರು ದಾಖಲಿಸಿದ್ದರು. ಇದರ ಆಧಾರದಲ್ಲಿ ಸಂಚಾರಿ ದಳದ ಅಧಿಕಾರಿಗಳು ಇತ್ತೀಚೆಗೆ ತನಿಖೆ ಕೈಗೆತ್ತಿಕೊಂಡಿದ್ದರು. ಬಳಿಕ ನಡೆದ ಬೆಳವಣಿಗೆಯಲ್ಲಿ ಅರಣ್ಯ ಲೂಟಿ ವಿಚಾರ ರಾಜ್ಯಾಧ್ಯಂತ ಸುದ್ದಿಯಾಗಿತ್ತು. ಇದೀಗ ಮತ್ತೆ ಅರಣ್ಯ ಸಂಚಾರಿ ದಳದವರು ದೂರುದಾರನ ವಿರುದ್ದವೇ ಪ್ರಕರಣ ದಾಖಲಿಸಿದ್ದಾರೆ. ಮಂಗಳವಾರ ತಡರಾತ್ರಿ ಮೂರು ವಾಹನಗಳಲ್ಲಿ ಸಂಚಾರಿ ದಳದ ಸಂಧ್ಯಾ ಅವರ ನೇತೃತ್ವದ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಪ್ರಸಾದ್ ಅವರು ಅಕ್ರಮವಾಗಿ ಮರ ಕಡಿದು ಮನೆಯಲ್ಲಿ ಶೇಖರಣೆ ಮಾಡಿದ್ದಾರೆ ಎನ್ನುವ ಆರೋಪದಲ್ಲಿ ದಾಳಿ ನಡೆಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರಾತ್ರಿ ವೇಳೆ ಮನೆ ಜಾಲಾಡಿದ ಅರಣ್ಯಾಧಿಕಾರಿಗಳು- ಅಧಿಕಾರಿಗಳ ಕ್ರಮಕ್ಕೆ ಆಕ್ರೋಶ:
ರಾತ್ರಿ ಸುಮಾರು ಮೂರು ಗಂಟೆಗೂ ಹೆಚ್ಚು ಕಾಲ ಮನೆಯಲ್ಲಿ ತನಿಖೆ ನಡೆಸಿರುವ ಅಧಿಕಾರಿಗಳು, ಮನೆಯಲ್ಲಿ ಸುಮಾರು ಮೂವತ್ತು ವರ್ಷಗಳ ಹಿಂದೆ ಮಹಡಿಗೆ ಅಳವಡಿಸಿದ್ದ ಮರದ ಹಲಗೆಗಳನ್ನು ಕಿತ್ತು ಹೊತ್ತೊಯ್ದಿದ್ದಾರೆ. ಈ ವೇಳೆ ಮನೆಯಲ್ಲಿದ್ದ ಪಾತ್ರೆಗಳನ್ನು ಎತ್ತಿ ಬಿಸಾಕಿ, ಫ್ಯಾನ್ನ್ನು ಕಿತ್ತು ಬಿಸಾಡಲಾಗಿದೆ. ಹಾಗೂ ಮನೆಯಲ್ಲಿದ್ದ ನಗದು ದೋಚಿದ್ದಾರೆ ಎಂದು ಆರೋಪಿಸಲಾಗಿದೆ. ಇದೇ ವೇಳೆ ಮನೆಯಲ್ಲಿದ್ದ ಮಹಿಳೆಯರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಲಾಗಿದೆ ಎಂದು ಆರೋಪಿಸಿ ಪ್ರಸಾದ್ ಅವರ ತಾಯಿ ಸೀತಮ್ಮ ಅವರು ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.
ದಾಳಿ ವೇಳೆ ಯಾವ ಅರಣ್ಯಾಧಿಕಾರಿಗಳ ವಿರುದ್ಧ ದೂರು ನೀಡಲಾಗಿತ್ತೋ ಅವರು ಕೂಡಾ ದಾಳಿಯಲ್ಲಿ ಭಾಗವಹಿಸಿರುವುದು ವಿಡಿಯೋದಲ್ಲಿ ಗೋಚರಿಸುತ್ತಿದೆ ಎಂದು ಹೇಳಲಾಗಿದೆ. ಇತ್ತ ಅರಣ್ಯಾದಿಕಾರಿಯೊಬ್ಬರು ಪತ್ರಿಕೆಗಳಿಗೆ ಮಾಹಿತಿ ನೀಡಿ ಪ್ರಸಾದ್ ಅವರ ಮನೆಯಲ್ಲಿ ಅಕ್ರಮವಾಗಿ ಮರ ಕಡಿದು ದಾಸ್ತಾನು ಮಾಡಲಾಗಿದೆ ಎನ್ನುವ ಖಚಿತ ಮಾಹಿತಿ ಆಧಾರದಲ್ಲಿ ಪೊಲೀಸ್ ಸಂರಕ್ಷಣೆಯೊಂದಿಗೆ ದಾಳಿ ನಡೆಸಿದಾಗ ಅಪಾರ ಪ್ರಮಾಣದ ಹೆಬ್ಬಲಸು ಮರ ಪತ್ತೆಯಾಗಿದ್ದು ಅದನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಿದ್ದಾರೆ.
ನನ್ನ ಗಂಡನ ವಿರುದ್ಧ ವ್ಯವಸ್ಥಿತ ಷಡ್ಯಂತರ: ದೀಕ್ಷಿತಾ ಪ್ರಸಾದ್ ಆರೋಪ
ದಾಳಿಯ ಬಗ್ಗೆ ಹೇಳಿಕೆ ನೀಡಿರುವ ಪ್ರಸಾದ್ ಅವರ ಪತ್ನಿ ದೀಕ್ಷಿತಾ ನನ್ನ ಗಂಡ ಮನೆಯಲ್ಲಿ ಇಲ್ಲದ ವೇಳೆ, ಅರಣ್ಯ ಸಂಚಾರಿ ದಳದ ಮುಖ್ಯಸ್ಥೆ ಸಂಧ್ಯಾ ಅವರ ತಂಡ ಮನೆಗೆ ಮಧ್ಯರಾತ್ರಿ ವೇಳೆ ಆಗಮಿಸಿ ಗದರಿಸಿ ಬಾಗಿಲು ತೆರೆಸಿ ದರ್ಪ ಮೆರೆದಿದ್ದಾರೆ. ನಮಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ನನ್ನ ಅತ್ತೆ ವೃದ್ಧೆ ಎನ್ನುವುದನ್ನೂ ಮರೆತು ಅವರಿಗೆ ಹಲ್ಲೆ ನಡೆಸಿದ್ದಾರೆ. ಮೂವತ್ತು ವರ್ಷ ಹಳೆಯದಾದ ಮನೆಯ ಅಟ್ಟದ ಹಲಗೆಗಳನ್ನು ಕಿತ್ತು ಕೊಂಡೊಯ್ದಿದ್ದಾರೆ. ಮನೆಯ ಕಪಾಟು, ಪಾತ್ರೆ ಪಗಡಿಗಳನ್ನು ಎತ್ತಿ ಬಿಸಾಡಿದ್ದಾರೆ. ೨೫ ಸಾವಿರ ರೂ. ಹಣವನ್ನೂ ದೋಚಿದ್ದಾರೆ. ನಿನ್ನ ಗಂಡ ಎಲ್ಲಿ ಅಡಗಿದರೂ ಆತನನ್ನು ಬಿಡುವುದಿಲ್ಲ ಎಂದು ಬೆದರಿಕೆ ಹಾಕಿದ್ದಾರೆ. ನನ್ನ ಗಂಡ ಪ್ರಸಾದ್ ಅವರು ಅರಣ್ಯ ಇಲಾಖಾಧಿಕಾರಿಗಳ ವಿರುದ್ಧ ನೀಡಿದ ದೂರಿನ ಸೇಡು ತೀರಿಕೊಳ್ಳಲು ಈ ರೀತಿಯ ಸುಳ್ಳು ಅಪಾದನೆ ಮಾಡಲಾಗಿದೆ, ಮಾತು ಮಾತಿಗೆ ನಿನ್ನ ಗಂಡ ಅರಣ್ಯ ಅಧಿಕಾರಿಗಳ ವಿರುದ್ಧ ದೂರು ನೀಡಿದ್ದಾನೆ. ಈಗ ನಿನ್ನನ್ನು ರಕ್ಷಿಸಲು ಯಾವ ಪ್ರೆಸ್ನವರೂ ಇಲ್ಲ ಎಂದು ಛೇಡಿಸಿದ್ದಾರೆ. ನಮಗೆ ಅಪಾಯವಿದೆ ಎಂದು ಈ ಹಿಂದೆ ಕಡಬ ಠಾಣೆಗೆ ದೂರು ನೀಡಿದ್ದರೂ ಯಾವುದೇ ರಕ್ಷಣೆ ನೀಡದೆ ಪೋಲೀಸರು ದಾಂಧಲೆ ನಡೆಸಿದವರಿಗೆ ಸಹಕಾರ ನೀಡಿದ್ದಾರೆ ಎಂದು ಪ್ರಸಾದ್ ಅವರ ಪತ್ನಿ ಆರೋಪಿಸಿದ್ದಾರೆ.
ಕುಡಿದು ತೂರಾಡುತ್ತಿದ್ದ ಇಲಾಖಾಧಿಕಾರಿಗಳು!
ಈ ಬಗ್ಗೆ ಹೇಳಿಕೆ ನೀಡಿರುವ ದೀಕ್ಷಾ ಅವರು ಇಲಾಖೆಯ ಅಧಿಕಾರಿಗಳು ಮಧ್ಯಸೇವಿಸಿ ತೂರಾಡುತ್ತಿದ್ದರು, ಮಧ್ಯದ ವಾಸನೆ ಬಡಿಯುತ್ತಿತ್ತು. ಅಲ್ಲದೆ ಮನೆಯೊಳಗೆ ಜಾಲಾಡುತ್ತಿರುವ ವೇಳೆಯಲ್ಲಿಯೂ ಅವರ ವಾಹನದಿಂದ ಮಧ್ಯ ತಂದು ಕುಡಿಯುತ್ತಿದ್ದದ್ದು ನಮ್ಮ ಗಮನಕ್ಕೆ ಬಂದಿದೆ. ಅಲ್ಲದೆ ಸಂಧ್ಯಾ ಅವರು ಅಂಗಳದಲ್ಲಿ ನಿಂತುಕೊಂಡು ಇವತ್ತು ನಾವು ಗೆದ್ದಿದ್ದೇವೆ. ನೀವು ಬಿಯರ್ ಪಾರ್ಟಿ ಕೊಡಬೇಕು ಎಂಬುದಾಗಿ ಹೇಳಿಕೊಳ್ಳುತ್ತಾ ಇದ್ದರು ಎಂದು ದೀಕ್ಷಾ ಅವರು ಮಾಧ್ಯಮಕ್ಕೆ ಮಾಹಿತಿ ನೀಡಿದರು.
ಪ್ರಸಾದ್ ವಿರುದ್ದ ಪ್ರಕರಣ ದಾಖಲು-ರಾಘವೇಂದ್ರ, ವಲಯಾರಣ್ಯಧಿಕಾರಿ
ಈ ಘಟನೆಯ ಬಗ್ಗೆ ಕರೆ ಮಾಡಿದ ಸುಬ್ರಹ್ಮಣ್ಯ ವಲಯ ಅರಣ್ಯಾಧಿಕಾರಿ ರಾಘವೇಂದ್ರ ಅವರು, ಪ್ರಸಾದ್ ಅವರ ಮನೆಗೆ ನಿನ್ನೆ ರಾತ್ರಿ ಅರಣ್ಯ ಸಂಚಾರಿ ದಳದ ಅಧಿಕಾರಿಗಳು ದಾಳಿ ನಡೆಸಿದಾಗ ಅವರ ಮನೆಯಲ್ಲಿ ಹೆಬ್ಬಲಸು ಮರಗಳು ದೊರೆತಿದೆ. ಅವರ ವಿರುದ್ದ ಪ್ರಕರಣ ದಾಖಲಿಸಲಾಗಿದೆ ಎಂದು ಮಾಹಿತಿ ನೀಡಿದರು.