ಉಳ್ಳಾಲ, ಮಾ. 03 (DaijiworldNews/SM): ತಲಪಾಡಿ ಟೋಲ್ ಗೇಟ್ ಮುಂಭಾಗದಲ್ಲಿ ಅವೈಜ್ಞಾನಿಕವಾಗಿ ಬಸ್ ನಿಲುಗಡೆ ಮತ್ತು ದುಬಾರಿ ಟೋಲ್ ದರ ವಿರೋಧಿಸಿ ತಲಪಾಡಿ ಟೋಲ್ ಗೇಟ್ ಮುಂಭಾಗದಲ್ಲಿ ಟೋಲ್ ಗೇಟ್ ಹೋರಾಟಗಾರರ ಸಮಿತಿ ಆಶ್ರಯದಲ್ಲಿ ಬುಧವಾರ ಪ್ರತಿಭಟನೆ ನಡೆಸಿತು.








ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿದ ವಿನಯ ನಾಯ್ಕ್, ಬಸ್ ಗಳು ಟೋಲ್ ಗೇಟ್ ದಾಟಿ ಮುಂದೆ ಹೋಗಬೇಕು. ಜನರಿಗೆ ಅನಾನುಕೂಲವಾದ ಜಾಗದಲ್ಲಿ ಬಸ್ ನಿಲ್ಲಿಸುವುದರಿಂದ, ಹಿರಿಯ ನಾಗರಿಕರಿಗೆ, ಮಹಿಳೆಯರಿಗೆ, ವಿದ್ಯಾರ್ಥಿಗಳಿಗೆ ಸಮಸ್ಯೆಯಾಗುತ್ತಿದೆ. ಇದಕ್ಕೆ ಅವಕಾಶ ನೀಡಬಾರದು ಎಂದು ಒತ್ತಾಯಿಸಿದರು. ಈ ಹಿಂದೆ ಇದ್ದಂತೆ ಬಸ್ಸುಗಳು ಟೋಲ್ ದಾಟಿ ಹೋಗಬೇಕು ಎಂದು ಒತ್ತಾಯಿಸಿದ ಪ್ರತಿಭಟನಾಕಾರರು ಸದ್ಯ ಬಸ್ ನಿಲುಗಡೆಯಾಗುತ್ತಿರುವ ತಂಗುದಾಣಕ್ಕೆ ಬಸ್ ಗಳು ಬಾರದಂತೆ ತಡೆದು ನೇರವಾಗಿ ಟೋಲ್ ಗೇಟ್ ದಾಟಿ ಹೋಗಬೇಕು ಎಂದು ಒತ್ತಾಯಿಸಿದರು.
ಅದರಂತೆ ಎಂದಿನಂತೆ ತಂಗುದಾಣಕ್ಕೆ ತೆರಳಲು ಟೋಲ್ ಮುಂಭಾಗದಲ್ಲಿ ನಿಂತಿದ್ದ ಬಸ್ ಗಳನ್ನು ತಡೆದ ಟೋಲ್ ಸಿಬ್ಬಂದಿ, ಟ್ರಿಪ್ ಒಂದಕ್ಕೆ 260 ರೂ. ಪಾವತಿಸುವಂತೆ ಸೂಚಿಸಿದರು. ಆದರೆ ಇದಕ್ಕೆ ಬಸ್ ಮಾಲಕರು ನಿರಾಕರಿಸಿದರು. ಇದರಿಂದ ಸುಮಾರು ಒಂದು ಗಂಟೆ ಕಾಲ ಟೋಲ್ ಮುಂಭಾಗದಲ್ಲಿ ಬಸ್ ಬಾಕಿಯಾಯಿತು. ಇದರಿಂದ ಬಸ್ಸಿನಲ್ಲಿದ್ದ ಪ್ರಯಾಣಿಕರು ತೊಂದರೆಗೊಳಗಾದರು. ಈ ಸಂದರ್ಭದಲ್ಲಿ ಘಟನಾ ಸ್ಥಳಕ್ಕೆ ಆಗಮಿಸಿದ ಉಳ್ಳಾಲ ಇನ್ ಸ್ಪೆಕ್ಟರ್ ಸಂದೀಪ್ ಬಸ್ ಮಾಲಕರ ಜತೆ ಮಾತುಕತೆ ನಡೆಸಿ ಇಂದೊಂದು ದಿನ ಟೋಲ್ ಪಾವತಿಸಿ ಬಸ್ ಗಳು ಓಡಾಡುವಂತೆ ಮಾಡಿ. ಸಂಜೆಯೊಳಗೆ ಅಧಿಕಾರಿಗಳ ಜೊತೆ ಸಭೆ ನಡೆಸಿ ಟೋಲ್ ದರದ ತೀರ್ಮಾನ ಕೈಗೊಳ್ಳಲಾಗುವುದು ಎಂದು ಸೂಚಿಸಿದರು.
ಆದರೆ ಇದಕ್ಕೆ ಬಸ್ ಮಾಲಕರು ಒಪ್ಪಲಿಲ್ಲ. ತಲಪಾಡಿ ಬಸ್ ಮಾಲಕರ ಸಂಘದ ಅಧ್ಯಕ್ಷ ಕರೀಂ ಮಾತನಾಡಿ, ಪ್ರತೀ ಟ್ರಿಪ್ ಗೆ 260 ರೂ. ಟೋಲ್ ಪಾವತಿ ಮಾಡಲು ಸಾಧ್ಯವಿಲ್ಲ. ಬೇಕಾದರೆ ತಿಂಗಳಿಗೆ 10,000 ರೂ. ಟೋಲ್ ಪಾವತಿ ಮಾಡುತ್ತೇವೆ. ಅಥವಾ ಸಂಘದ ಅಧೀನದಲ್ಲಿ 31 ಬಸ್ ಗಳಿದ್ದು, ಈ ಎಲ್ಲ ಬಸ್ ಗಳು ಒಟ್ಟಾಗಿ ಪ್ರತೀ ತಿಂಗಳು ಎರಡು ಲಕ್ಷ ರೂ. ನೀಡುತ್ತೇವೆ ಎಂದರು. ಬಳಿಕ ಇನ್ ಸ್ಪೆಕ್ಟರ್ ಸಂದೀಪ್ ಟೋಲ್ ಅಧಿಕಾರಿಗಳ ಜತೆ ಮಾತುಕತೆ ನಡೆಸಿ ಬಸ್ ಗಳಿಗೆ ಒಂದು ದಿನದ ಮಟ್ಟಿಗೆ ಟೋಲ್ ರಿಯಾಯಿತಿ ಒದಗಿಸಿ ಕೊಟ್ಟರು. ಬಳಿಕ ಬಸ್ ಸಂಚಾರ ಪುನರಾರಂಭಗೊಂಡಿತು.