ಮಂಗಳೂರು, ಮಾ.04 (DaijiworldNews/MB): ''ನಗರದಲ್ಲಿ ಈಗ ಸಾವಿರಾರು ಕೋಟಿ ರೂಪಾಯಿಗಳ ಮೌಲ್ಯದ ಅಭಿವೃದ್ಧಿ ಕಾರ್ಯಗಳು ಪ್ರಗತಿಯಲ್ಲಿವೆ. ಈ ಯೋಜನೆಗಳನ್ನು ಸರಿಯಾಗಿ ಕಾರ್ಯಗತಗೊಳಿಸುವತ್ತ ಗಮನಹರಿಸಲಾಗುವುದು. ಸಮಗ್ರ ಕುಡಿಯುವ ನೀರು ಸರಬರಾಜು ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲಾಗುವುದು'' ಎಂದು ನೂತನ ಮೇಯರ್ ಪ್ರೇಮಾನಂದ ಶೆಟ್ಟಿ ಅವರು ಭರವಸೆ ನೀಡಿದರು.










ಬುಧವಾರ ಹಿಂದಿನ ಮೇಯರ್ ದಿವಾಕರ್ ಪಾಂಡೇಶ್ವರ ಅವರು ನೂತನ ಮೇಯರ್ ಪ್ರೇಮಾನಂದ ಶೆಟ್ಟಿ ಅವರಿಗೆ ಅಧಿಕಾರ ಹಸ್ತಾಂತರ ಮಾಡಿದ ಬಳಿಕ ಮಾತನಾಡಿದ ಪ್ರೇಮಾನಂದ ಶೆಟ್ಟಿಯವರು, "ಹಿಂದಿನ ಅವಧಿಯಲ್ಲಿ ಕೈಗೆತ್ತಿಕೊಂಡಿರುವ ಕಾರ್ಯಗಳನ್ನು ಸಮಯೋಚಿತವಾಗಿ ಕಾರ್ಯಗತಗೊಳಿಸಲು ಮೊದಲ ಆದ್ಯತೆ ನೀಡಲಾಗುವುದು. ಸಮಗ್ರ ಕುಡಿಯುವ ನೀರು ಸರಬರಾಜು ಯೋಜನೆಗೆ ಸಂಬಂಧಿಸಿದಂತೆ, ಪ್ರಸ್ತುತ ಇರುವ ವ್ಯವಸ್ಥೆಯನ್ನು ನವೀಕರಿಸಿ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಪ್ರತಿ ತಿಂಗಳು ಸಭೆಗಳನ್ನು ನಡೆಸಲಾಗುವುದು'' ಎಂದು ಹೇಳಿದರು.
''ನಗರಕ್ಕೆ ಹಂಚಿಕೆಯಾದ ಸ್ಮಾರ್ಟ್ ಸಿಟಿ ಯೋಜನೆಯನ್ನು ಪಡೆಯುವಲ್ಲಿ ಜನರ ಪಾತ್ರ ಪ್ರಮುಖವಾದುದು. ಸ್ಮಾರ್ಟ್ ಸಿಟಿ ಯೋಜನೆಗಳನ್ನು ಶೀಘ್ರವಾಗಿ ಪೂರ್ಣಗೊಳಿಸಲು ಪ್ರಯತ್ನಿಸುತ್ತೇನೆ'' ಎಂದು ತಿಳಿಸಿದರು.
"ಘನತ್ಯಾಜ್ಯ ವಿಲೇವಾರಿಯ ಗುತ್ತಿಗೆ ವಹಿಸಿರುವವರ ಅವಧಿ ಶೀಘ್ರದಲ್ಲೇ ಕೊನೆಗೊಳ್ಳುತ್ತಿದೆ. ಸರ್ಕಾರದ ಮಾರ್ಗಸೂಚಿಗಳ ಪ್ರಕಾರ, ಪಾಲಿಕೆಯ ಆಯುಕ್ತರು ಪೌರ ಕಾರ್ಮಿಕರನ್ನು ಹೊರಗುತ್ತಿಗೆ ಅಥವಾ ನೇರವಾಗಿ ನೇಮಕ ಮಾಡಿಕೊಳ್ಳುತ್ತಾರೆ" ಎಂದು ಅವರು ತಿಳಿಸಿದರು. ಈ ಹಿಂದಿನ ಆಡಳಿತವು ಸರಿಯಾಗಿ ಯೋಜನೆ ರೂಪಿಸದೆ ಆತುರದಲ್ಲಿ ಉರ್ವಾ ಮಾರುಕಟ್ಟೆ ಕಟ್ಟಡವನ್ನು ತೆರೆದಿದೆ ಎಂದು ಆರೋಪಿಸಿದ ಅವರು, ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು ಸಮಸ್ಯೆಗೆ ಕೆಲವು ಪರಿಹಾರ ಕಂಡುಕೊಂಡಿದ್ದು ಸಮಸ್ಯೆಯನ್ನು ಜಂಟಿಯಾಗಿ ನಿಭಾಯಿಸುವ ಪ್ರಯತ್ನ ಮಾಡಲಾಗುವುದು'' ಎಂದರು.
''ನಗರದ ಪ್ರಮುಖ ಚರಂಡಿಗಳ ಅತಿಕ್ರಮಣದ ಬಗ್ಗೆ, ಎಂಟು ವಾರ್ಡ್ಗಳಲ್ಲಿ ಡ್ರೋನ್ ಸಮೀಕ್ಷೆ ನಡೆಸಲಾಗಿದ್ದು, ಇದು ಅತಿಕ್ರಮಣದ ಸ್ಪಷ್ಟ ಚಿತ್ರಣವನ್ನು ನೀಡುತ್ತದೆ. ಈ ಅತಿಕ್ರಮಣಗಳನ್ನು ತೆರವುಗೊಳಿಸಲು ಕಟ್ಟುನಿಟ್ಟಾದ ಕ್ರಮ ತೆಗೆದುಕೊಳ್ಳಲಾಗುವುದು'' ಎಂದು ಹೇಳಿದರು.
ಶಾಸಕರಾದ ಡಿ ವೇದವ್ಯಾಸ್ ಕಾಮತ್ ಮತ್ತು ಡಾ.ವೈ.ಭರತ್ ಶೆಟ್ಟಿ, ಮೂಡಾ ಅಧ್ಯಕ್ಷ ರವಿಶಂಕರ್ ಮಿಜಾರ್, ಮಾಜಿ ಮೇಯರ್ ದಿವಾಕರ್ ಪಾಂಡೇಶ್ವರ, ಮಾಜಿ ಉಪ ಮೇಯರ್ ವೇದಾವತಿ ಮತ್ತು ಕಾರ್ಪೋರೇಟರ್ಗಳು ಉಪಸ್ಥಿತರಿದ್ದರು.
ಪ್ರಸ್ತುತ ಪ್ರತಿ ವಾರ್ಡ್ಗೆ ಒಬ್ಬರಂತೆ ಕಾರ್ಯನಿರ್ವಹಿಸುತ್ತಿರುವ ಒರ್ವ ಎಂಪಿಡಬ್ಲ್ಯೂ ಕಾರ್ಮಿಕರ ಜೊತೆಗೆ 30 ಜನರನ್ನು ನೇಮಕ ಮಾಡಲು ಆಯುಕ್ತರು ಸೂಚಿಸಿದ್ದಾರೆ ಎಂದು ಶೆಟ್ಟಿ ಹೇಳಿದರು. ನೀರಿನ ಮೀಟರ್ ಹೆಚ್ಚಳದ ದೂರುಗಳ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳ ಬಳಿ ಸಮಸ್ಯೆ ಸರಿಪಡಿಸಲು ಸೂಚಿಸಿದರು.
ಉಪ ಮೇಯರ್ ಸುಮಂಗಲ ರಾವ್ ಕೂಡ ಈ ಸಂದರ್ಭದಲ್ಲಿ ಉಸ್ತುವಾರಿ ವಹಿಸಿಕೊಂಡರು.