ಮಂಗಳೂರು, ಮಾ.04 (DaijiworldNews/MB): ಜಿಲ್ಲಾಡಳಿತವು ನಗರದ ಹೊರವಲಯದ ಕೆಂಜಾರಿನಲ್ಲಿರುವ ಗೋಶಾಲೆಯನ್ನು ಪೊಲೀಸ್ ಸಹಾಯದಿಂದ ತೆರವುಗೊಳಿಸಿದ್ದು ಸರ್ಕಾರಿ ಭೂಮಿಯಲ್ಲಿ ಅಕ್ರಮ ಗೋಶಾಲೆ ಕಟ್ಟಲಾಗಿದೆ ಎಂದು ಆರೋಪಿಸಿದ್ದಾರೆ. ಜಿಲ್ಲಾಡಳಿತದ ಪ್ರಕಾರ, ಗೋ ಶಾಲೆ ಇರುವ ಭೂಮಿಯನ್ನು ಕರಾವಳಿ ಗಾರ್ಡ್ನ ತರಬೇತಿ ಕೇಂದ್ರಕ್ಕೆ ಮೀಸಲಿಡಲಾಗಿದೆ.




ಫೆಬ್ರವರಿ 22 ರಂದು ಜಿಲ್ಲಾ ಪಂಚಾಯತ್ನ ನೇತ್ರಾವತಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಮಾನಿಟರಿಂಗ್ ಸಮಿತಿ (ದಿಶಾ) ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಅವರು, ''ಮುಂಬರುವ ವಾರದಲ್ಲಿ ಕರಾವಳಿ ಕಾವಲು ತರಬೇತಿಗಾಗಿ ನಿಗದಿಪಡಿಸಿದ ಅತಿಕ್ರಮಣ ಭೂಮಿಯನ್ನು ಖಾಲಿ ಮಾಡಲು ಜಿಲ್ಲಾಡಳಿತ ಕ್ರಮ ಕೈಗೊಳ್ಳಲಿದೆ'' ಎಂದು ಹೇಳಿದರು.
ಈ ಬಗ್ಗೆ ದಾಯ್ಜಿವಲ್ಡ್ ಜೊತೆ ಮಾತನಾಡಿದ ಜಾನುವಾರು ಮಾಲೀಕ ಜಯಪ್ರಕಾಶ್ ಶೆಟ್ಟಿ, "ಯಾವುದೇ ಸೂಚನೆ ನೀಡದೆ ಜಿಲ್ಲಾಡಳಿತವು ದನಗಳ ಆಶ್ರಯವನ್ನು ನೆಲಸಮ ಮಾಡಿದೆ. ನನ್ನ ಗೋಶಾಲೆಯಲ್ಲಿ 300 ದನಗಳಿವೆ. ನಾನು ದನಕರುಗಳಿಗೆ ಎಲ್ಲಿ ಸಾಕುವುದು'' ಎಂದು ಅಳಲು ತೋಡಿಕೊಂಡಿದ್ದಾರೆ.
''ಜಮೀನಿನ ಮಾರಾಟ ಪತ್ರವೂ ಸಹ ನನ್ನ ಹೆಸರಿನಲ್ಲಿದೆ. ಸರ್ಕಾರ ಕನಿಷ್ಠ ಗೋಶಾಲೆಗೆ ಪರ್ಯಾಯ ಭೂಮಿಯನ್ನು ಒದಗಿಸಬೇಕು. ಯಾವುದೇ ಸೂಚನೆ ನೀಡದೆಯೇ ಗೋಶಾಲೆ ನೆಲಸಮ ಮಾಡಲಾಗಿದೆ'' ಎಂದು ಆರೋಪಿಸಿದ್ದಾರೆ.
"ಆಡಳಿತ ಮತ್ತು ಪ್ರತಿನಿಧಿಯ ಈ ಕ್ರೂರ ಕೃತ್ಯವು ಹಿಂದುತ್ವ ಮತ್ತು ಮಾನವೀಯತೆಗೆ ಬಗೆದ ದ್ರೋಹವಾಗಿದೆ. ಮೊಘಲ್ ಆಡಳಿತಕ್ಕಿಂತ ಕೆಟ್ಟದಾದ ಆಡಳಿತವಿದು'' ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
''ನಗರದಲ್ಲಿ ಕೆಲವು ಅಕ್ರಮವಾಗಿ ನಿರ್ಮಿಸಲಾದ ಕಟ್ಟಡಗಳು ಇವೆ ಎಂದು ಕೆಲವು ಸಾರ್ವಜನಿಕರು ದೂರಿದ್ದಾರೆ. ಆದರೆ ಅದರ ವಿರುದ್ದ ಯಾವುದೇ ಕ್ರಮ ಕೈಗೊಳ್ಳದ ಜಿಲ್ಲಾಡಳಿತ ಗೋಶಾಲೆಯ ಮೇಲೆ ಕ್ರಮ ಕೈಗೊಂಡಿದೆ. ಈಗ ಈ ಗೋಶಾಲೆಯಲ್ಲಿನ ದನಗಳನ್ನು ಎಲ್ಲಿ, ಯಾರು ನೋಡಿಕೊಳ್ಳುವುದು'' ಎಂದು ಜಿಲ್ಲಾಡಳಿತವನ್ನು ಪ್ರಶ್ನಿಸಿದ್ದಾರೆ.
ಇನ್ನು ಫೆಬ್ರವರಿ 22 ರಂದು ನಡೆದ ಸಭೆಯಲ್ಲಿ ಬಿಜೆಪಿ ರಾಜ್ಯ ಅಧ್ಯಕ್ಷ, ಸಂಸದ ನಳಿನ್ ಕುಮಾರ್ ಕಟೀಲ್ ಅವರು, ''ಈ ಗೋಶಾಲೆ ಅಕ್ರಮವಾಗಿದ್ದರೆ ಇದರ ವಿರುದ್ದ ಕ್ರಮ ಕೈಗೊಳ್ಳಬಹುದು'' ಎಂದು ಹೇಳಿದ್ದರು.