ನವದೆಹಲಿ,ಮಾ 04 (DaijiworldNews/MS): ನಗರಾಭಿವೃದ್ಧಿ ಸಚಿವಾಲಯ ಸಿದ್ಧಪಡಿಸಿದ ಈಸ್ ಆಫ್ ಲಿವಿಂಗ್ ಇಂಡೆಕ್ಸ್ (EOLI) ಅಂದರೆ, ದೇಶದಲ್ಲಿ ವಾಸಿಸಲು ಯೋಗ್ಯವಾದ ಅತ್ಯುತ್ತಮ ನಗರಗಳ ಸಾಲಿನಲ್ಲಿ 10 ಲಕ್ಷಕ್ಕಿಂತ ಕಡಿಮೆ ಜನಸಂಖ್ಯೆ ಇರುವ ವಿಭಾಗದಲ್ಲಿ ಮಂಗಳೂರು 20ನೇ ಸ್ಥಾನ ಪಡೆದುಕೊಂಡಿದೆ. ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವ ಹರ್ದೀಪ್ ಸಿಂಗ್ ಪುರಿ ಬಿಡುಗಡೆ ಮಾಡಿರುವ ಸೂಚ್ಯಂಕದ ಪ್ರಕಾರ, ಶಿಮ್ಲಾವು 'ಮಿಲಿಯನ್ ಗಿಂತ ಕಡಿಮೆ ಜನಸಂಖ್ಯೆಯುಳ್ಳ ನಗರಗಳ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. ಇನ್ನು ಪುರಸಭೆಯ ಕಾರ್ಯಕ್ಷಮತೆಯ ಸೂಚ್ಯಂಕದಲ್ಲಿ ಮಂಗಳೂರು ಪಾಲಿಕೆ (ಎಂಪಿಐ) ಯಲ್ಲಿ 42 ನೇ ಸ್ಥಾನವನ್ನು ಪಡೆದುಕೊಂಡಿದೆ.

ಇಒಎಲ್ಐ 2020 ರ ಈ ಶ್ರೇಯಾಂಕಗಳನ್ನು 10 ಲಕ್ಷಕ್ಕಿಂತ ಹೆಚ್ಚು ಜನಸಂಖ್ಯೆ ಇರುವ ನಗರಗಳು ಮತ್ತು 10 ಲಕ್ಷಕ್ಕಿಂತ ಕಡಿಮೆ ಜನಸಂಖ್ಯೆ ಇರುವ ನಗರಗಳು ಎಂಬ ಎರಡು ವಿಭಾಗಗಳಲ್ಲಿ ಪ್ರಕಟಿಸಲಾಗಿದೆ.10 ಲಕ್ಷಕ್ಕಿಂತ ಹೆಚ್ಚು ಜನಸಂಖ್ಯೆ ಇರುವ ನಗರಗಳ ಪೈಕಿ ಬೆಂಗಳೂರು ಮೊದಲ ಸ್ಥಾನ ಪಡೆದುಕೊಂಡಿದ್ದು ಪುಣೆ, ಅಹಮದಾಬಾದ್ ನಗರಗಳೂ ಸಹ ಈ ಪಟ್ಟಿಯಲ್ಲಿ ಕ್ರಮವಾಗಿ 2 ಮತ್ತು 3ನೇ ಸ್ಥಾನದಲ್ಲಿವೆ.
2020 ರಲ್ಲಿ ನಡೆಸಿದ ಮೌಲ್ಯಮಾಪನ ವ್ಯಾಯಾಮದಲ್ಲಿ ಒಟ್ಟು 111 ನಗರಗಳು ಭಾಗವಹಿಸಿದ್ದವು. ಸೂಚ್ಯಂಕದ ಮೊದಲ ಆವೃತ್ತಿಯನ್ನು 2018 ರಲ್ಲಿ ಪ್ರಾರಂಭಿಸಲಾಯಿತು. ವಾಸಿಸಲು ಯೋಗ್ಯವಾದ ಅತ್ಯುತ್ತಮ ನಗರ ಸೂಚ್ಯಂಕಗಳು , ನಗರಾಡಳಿತ, ಸಂಸ್ಕೃತಿ, ಶಿಕ್ಷಣ, ಆರೋಗ್ಯ, ಸುರಕ್ಷತೆ ,ಆರ್ಥಿಕತೆ, ಕೈಗೆಟುಕುವ ವಸತಿ, ಭೂ ಬಳಕೆ ಯೋಜನೆ, ಸಾರ್ವಜನಿಕರಿಗೆ ಮುಕ್ತ ಸ್ಥಳಗಳು , ಸಾರಿಗೆ ವ್ಯವಸ್ಥೆ, ನೀರು ಸರಬರಾಜು, ತ್ಯಾಜ್ಯ-ನೀರು ನಿರ್ವಹಣೆ, ಘನತ್ಯಾಜ್ಯ ನಿರ್ವಹಣೆ, ವಿದ್ಯುತ್ ಸೇರಿದಂತೆ 15 ಮೌಲ್ಯಮಾಪನ ಮಾನದಂಡಗಳ ಆಧಾರದ ಮೇಲೆ ಸ್ಥಾನ ಪಡೆದಿವೆ.