ಉಳ್ಳಾಲ, ಮಾ. 04 (DaijiworldNews/SM): ತಲಪಾಡಿ ರೂಟ್ ಬಸ್ ಗಳು ಕೊನೆಯ ಸ್ಟಾಪ್ ತನಕ ಹೋಗದೇ ಕಳೆದ ಒಂದು ವರ್ಷದಿಂದ ಪ್ರಯಾಣಿಕರು ಪಡುತ್ತಿದ್ದ ಸಂಕಷ್ಟಕ್ಕೆ ಇಂದು ಮಂಗಳೂರಿನ ಕದ್ರಿಯಲ್ಲಿರುವ ಮ.ನ.ಪಾ ವಿಭಾಗೀಯ ಕಚೇರಿಯಲ್ಲಿ ಜಿಲ್ಲಾಧಿಕಾರಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಒಂದು ಹಂತದ ಪರಿಹಾರ ಸಿಕ್ಕಿದೆ.





ಸಿಟಿ ಬಸ್ ಮಾಲೀಕರು ನವಯುಗ ಸಂಸ್ಥೆಗೆ ಮಾಸಿಕವಾಗಿ 14,000 ರೂಪಾಯಿ ಸುಂಕವನ್ನು ಪಾವತಿಸುವ ನಿರ್ಣಯ ಕೈಗೊಳ್ಳುವ ಮೂಲಕ ಒಂದು ಹಂತದ ಸಂಧಾನ ಮುಗಿಸಿದೆ. ಜಿಲ್ಲಾಧಿಕಾರಿ ಕೆ.ವಿ. ರಾಜೇಂದ್ರ ನೇತೃತ್ವದಲ್ಲಿ ಬಸ್ಸು ಮಾಲಕರು, ಟೋಲ್ ಅಧಿಕಾರಿಗಳ ನಡುವೆ ಗುರುವಾರ ಸಭೆ ನಡೆದಿದೆ. ಸಭೆಯಲ್ಲಿ ಪ್ರತೀ ಬಸ್ಸುಗಳು ತಿಂಗಳಿಗೆ 14,000 ರೂಪಾಯಿ ಸುಂಕವನ್ನು ಟೋಲ್ ಗೆ ನೀಡಬೇಕೆಂಬ ತೀರ್ಮಾನಕ್ಕೆ ಸಭೆಯಲ್ಲಿ ಸರ್ವಾನುಮತದ ಒಪ್ಪಿಗೆ ಸಿಕ್ಕಿದೆ.
ತಿಂಗಳ 14,000 ರೂಪಾಯಿ ಟೋಲನ್ನು ಮುಂಗಡವಾಗಿ ಕಟ್ಟಿದ ಮೇಲೆ ಅವರ ಪಾಸ್ಟ್ ಸ್ಟ್ಯಾಗ್ ಆಕ್ಟಿವೇಶನ್ ಆದ ಬಳಿಕ ಸಿಟಿ ಬಸ್ಸುಗಳು ತಲಪಾಡಿ ಟೋಲ್ ಗೇಟನ್ನು ಹಾದು ಮೇಲಿನ ತಲಪಾಡಿಗೆ ತೆರಳಬಹುದಾಗಿದೆ. ಇದಕ್ಕಾಗಿ ಮಂಗಳೂರಿನಿಂದ ಮೇಲಿನ ತಲಪಾಡಿಗೆ ಸಂಚರಿಸುವ ಪ್ರಯಾಣಿಕರ ಟಿಕೆಟ್ ದರದಲ್ಲಿ 2 ರೂಪಾಯಿ ಏರಿಕೆ ಆಗಲಿದೆ. ಅಲ್ಲದೆ ತಲಪಾಡಿಯ ಸ್ಥಳೀಯ ವಾಹನ ಸವಾರರಿಗೆ ಟೋಲ್ನಲ್ಲಿ ರಿಯಾಯಿತಿ ನೀಡಲಾಗಿದೆ.
ದೈಜಿವರ್ಲ್ಡ್ ವರದಿ ಫಲಶ್ರುತಿ:
ಇನ್ನು ಖಾಸಗಿ ಬಸ್ ಗಳು ತಲಾಪಾಡಿಯ ಟೋಲ್ ಗೇಟ್ ದಾಟದೇ ಇರುವುದರಿಂದ ವೃದ್ಧರು, ಮಹಿಳೆಯರು, ಮಕ್ಕಳು ಸೇರಿದಂತೆ ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದಾರೆ ಎಂದು ದೈಜಿವರ್ಲ್ಡ್ ವಾಹಿನಿ ಹಲವು ಬಾರಿ ವರದಿ ಪ್ರಸಾರ ಮಾಡಿತ್ತು. ಅಲ್ಲದೆ, ಗಡಿ ಭಾಗದ ಮುಗ್ದ ಜನರ ಧ್ವನಿಯಾಗುವ ನಿಟ್ಟಿನಲ್ಲಿ ಅಧಿಕಾರಿಗಳ ಗಮನಕ್ಕೆ ತರಲಾಗಿತ್ತು. ಹಲವು ಬಾರಿ ಅಧಿಕಾರಿಗಳನ್ನು ಸಂಪರ್ಕಿಸಿ ಜನಸಾಮಾನ್ಯರು ಎದುರಿಸುತ್ತಿರುವ ಸಮಸ್ಯೆಯನ್ನು ಮನವರಿಕೆ ಮಾಡಲಾಗಿತ್ತು. ಇದೀಗ ಈ ವರದಿಗೆ ಫಲ ಸಿಕ್ಕಂತಾಗಿದೆ.