ಮಂಗಳೂರು, ಮಾ 05 (DaijiworldNews/MS): ಸ್ಕೂಟರ್ ಸವಾರರೊಬ್ಬರು ಸಂಚರಿಸುತ್ತಿದ್ದಾಗ ದಾರಿ ಮದ್ಯೆ ಮೂವರು ಅಪರಿಚಿತರು ತಡೆದು ನಿಲ್ಲಿಸಿ 16.20 ಲಕ್ಷ ರೂ. ದೋಚಿ ಪರಾರಿಯಾದ ಘಟನೆ ನಗರದ ಪಾಂಡೇಶ್ವರದ ಓಲ್ಡ್ ಕೆಂಟ್ ರಸ್ತೆಯಲ್ಲಿ ನಡೆದಿದೆ.

ಸೂರಲ್ಪಾಡಿಯ ಅಬ್ದುಲ್ ಸಲಾಂ (49) ಹಣ ಕಳೆದು ಕೊಂಡ ವ್ಯಕ್ತಿ. ಅಬ್ದುಲ್ ಸಲಾಂ ಅವರು ತನ್ನ ಅಕ್ಕನ ಮಗಳ ಮದುವೆಗಾಗಿ ವಸ್ತ್ರ ಹಾಗೂ ಚಿನ್ನಾಭರಣ ಖರೀದಿಸಲು 16,20,000 ರೂ. ನಗದು ಹಣದೊಂದಿಗೆ ಫೆ. 22ರಂದು ಒಲ್ಡ್ ಕೆಂಟ್ ರಸ್ತೆಯಲ್ಲಿ ಆ್ಯಕ್ಟಿವಾ ಹೋಂಡಾ ಸ್ಕೂಟರ್ನಲ್ಲಿ ಸಂಚರಿಸುತ್ತಿದ್ದಾಗ ದಾರಿ ಮಧ್ಯೆ 3 ಮಂದಿ ಅಪರಿಚಿತರು ತಡೆದು ಸ್ಕೂಟರ್ನಿಂದ ಲಕೋಟೆಯೊಂದು ಕೆಳಗೆ ಬಿದ್ದಿದೆ ಎಂದು ಹೇಳಿದ್ದಾರೆ.
ಅಬ್ದುಲ್ ಸಲಾಂ ಅವರು ಸ್ಕೂಟರ್ ನಿಲ್ಲಿಸಿ ಇಳಿದು ರಸ್ತೆಯಲ್ಲಿ ಏನು ಬಿದ್ದಿರಬಹುದೆಂದು ಹಿಂದಿರುಗಿ ನೋಡುವಷ್ಟರಲ್ಲಿ ಸ್ಕೂಟರಿನ ಹುಕ್ಗೆ ಸಿಕ್ಕಿಸಿದ್ದ ಪ್ಲಾಸ್ಟಿಕ್ ಚೀಲವನ್ನು ಮೂವರು ಅಪರಿಚಿತರು ಎತ್ತಿಕೊಂಡು ಪರಾರಿಯಾಗಿದ್ದಾರೆ. ಅಬ್ದುಲ್ ಸಲಾಂ ಅವರು 16,20,000 ರೂ. ಗಳನ್ನು ಈ ಪ್ಲಾಸ್ಟಿಕ್ ಚೀಲದಲ್ಲಿ ಇರಿಸಿದ್ದರು.
ಈ ಬಗ್ಗೆ ಪಾಂಡೇಶ್ವರ ಪೊಲೀಸ್ ಠಾಣೆಗೆ ಅಬ್ದುಲ್ ಸಲಾಂ ಅವರು ಮಾ. 4ರಂದು ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.