ಸುಳ್ಯ, ಜು 25 :ರಸ್ತೆ ಬದಿಯಲ್ಲಿರುವ ಅನಧಿಕೃತ ಕಟ್ಟಡಗಳನ್ನು ಕೂಡಲೇ ತೆರವುಗೊಳಿಸಿ ಅಲ್ಲದೇ ಸರಕಾರಿ ಜಾಗ ಖಾಸಗಿಯವರಿಂದ ಒತ್ತುವರಿ ಆಗಿದ್ದರೆ ವಶಪಡಿಸಿಕೊಳ್ಳಬೇಕು ಎಂದು ಸುಳ್ಯ ತಹಸೀಲ್ದಾರ್ ಸಂತೋಷ್ ಕುಮಾರ್ ಸೂಚನೆ ನೀಡಿದರು.
ಅವರು ಸುಳ್ಯ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ಸಂಜೆ ನಡೆದ ಎಸ್ಸಿ ಎಸ್ಟಿ ಕುಂದುಕೊರತೆ ಸಭೆಯಲ್ಲಿ ಮಾತನಾಡಿದರು. ಗುತ್ತಿಗಾರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗುತ್ತಿಗಾರು ಪೇಟೆಯಲ್ಲಿ ರಸ್ತೆ ಬದಿ ಅನಧಿಕೃತ ಅಂಗಡಿಗಳಿಂದಾಗಿ ಜನಸಂಚಾರಕ್ಕೆ ಸಮಸ್ಯೆಯುಂಟಾಗಿರುವುದರಿಂದ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಅಚ್ಚುತ್ತ ಗುತ್ತಿಗಾರು ಹೇಳಿದರು. ಇದಕ್ಕೆ ಉತ್ತರಿಸಿದ ತಹಸೀಲ್ದಾರ್ ಅನಧಿಕೃತ ಕಟ್ಟಡ ಮತ್ತು ಜಾಗ ಒತ್ತುವರಿ ಆಗಿದ್ದರೆ ಕೂಡಲೇ ವಶಪಡಿಸಿಕೊಳ್ಳಬೇಕು ಎಂದು ಆದೇಶಿಸಿದರು.
ಒಂದನೇ ತರಗತಿಯಿಂದ ಹತ್ತನೇ ತರಗತಿವರೆಗಿನ ಎಸ್ಸಿ ಎಸ್ಟಿ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಗ್ರಾಮ ಪಂಚಾಯಿತಿ ನಿಧಿಯಿಂದ ವರ್ಷಕ್ಕೆ ಬೇಕಾಗುವಷ್ಟು ನೋಟ್ ಪುಸ್ತಕಗಳನ್ನು ವಿತರಣೆಗೆ ಒತ್ತಾಯಿಸಲಾಗಿತ್ತು. ಇದಕ್ಕೆ ಉತ್ತರಿಸಿದ ತಹಸೀಲ್ದಾರ್ ಗ್ರಾಮ ಪಂಚಾಯಿತಿ ನಿಧಿಯಿಂದ ಎಸ್ಸಿ ಎಸ್ಟಿ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ನೇರವಾಗಿ ನೋಟ್ ಪುಸ್ತಕಗಳನ್ನು ವಿತರಣೆ ಮಾಡಬೇಕು. ಇದಕ್ಕೆ ಗ್ರಾಮ ಪಂಚಾಯಿತಿ20% ನಿಧಿಯನ್ನು ನೀಡಲೇಬೇಕು. ಎಸ್ಸಿ ಎಸ್ಟಿ ವಿಧ್ಯಾರ್ಥಿಗಳನ್ನು ಶಿಕ್ಷಣ ಅನುಪಾತ ಕಡಿಮೆ ಇರುವ ಕಾರಣ ಈ ಯೋಜನೆಯನ್ನು ಮಾಡಲಾಗಿದೆ ಎಂದರು.
ಮೀಸಲು ಕ್ಷೇತ್ರವಾದ ಸುಳ್ಯದಲ್ಲಿ ಅಂಬೇಡ್ಕರ್ ಪ್ರತಿಮೆ ಇಲ್ಲ. ಪ್ರತಿಮೆ ಅಲ್ಲದಿದ್ದರೂ ಅಂಬೇಡ್ಕರ್ ವೃತ್ತವನ್ನಾದರೂ ನಗರ ಪಂಚಾಯಿತಿ ರಚಿಸಿಕೊಡಬೇಕು ಎಂದು ಆನಂದ ಬೆಳ್ಳಾರೆ ಹೇಳಿದರು. ಜಾಲ್ಸೂರು ಅಥವಾ ಪೈಚಾರಿನಲ್ಲಿ ಅಂಬೇಡ್ಕರ್ ವೃತ್ತ ಮಾಡಬೇಕು ಎಂದು ಸಲಹೆ ನೀಡಿದರು.
ಆಲೆಟ್ಟಿ ಗ್ರಾಮದ ಮೊರಂಗಲ್ಲು ಎಂಬಲ್ಲಿ ಯಾವುದೇ ಮೂಲಭೂತ ಸೌಕರ್ಯಗಳಿಲ್ಲ. ಬಸ್ ತಂಗುದಾನ ಶಿಥಿಲ ವ್ಯವಸ್ಥೆಯಲ್ಲಿದೆ. ರಸ್ತೆ ಬದಿ ವಿದ್ಯುತ್ ಕಂಬಗಳು ಅಪಾಯದಲ್ಲಿದೆ. ಗ್ರಾಮ ಪಂಚಾಯಿತಿಗೆ ಮನವಿ ಸಲ್ಲಿಸಿದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಚಂದ್ರಶೇಖರ್ ಮೊರಂಗಲ್ಲು ಹೇಳಿದರು. ಸಮಸ್ಯೆಗಳನ್ನು ಕೂಡಲೇ ಸರಿಪಡಿಸುವಂತೆ ತಹಸೀಲ್ದಾರ್ ಸೂಚನೆ ನೀಡಿದರು.
ಸುಳ್ಯ ನಗರದ ಕೇರ್ಪಳದಲ್ಲಿರುವ ಒಳಾಂಗಣ ಕ್ರೀಡಾಂಗಣ ಆರಂಭವಾಗಿ ೧೮ ವರ್ಷ ಕಳೆದರೂ ಸರಿಯಾಗಿ ಕಾಮಗಾರಿಗಳು ಪೂರ್ಣಗೊಂಡಿಲ್ಲ. ನಗರ ಪಂಚಾಯಿತಿ ಕೂಡಲೇ ಕಾಮಗಾರಿ ಮುಗಿಸಿ ಉದ್ಘಾಟನೆ ಮಾಡಬೇಕು ಎಂದು ಶೀನಪ್ಪ ಬಯಂಬು ಹೇಳಿದರು.
94ಸಿ ಯೋಜನೆಯಲ್ಲಿ ಅರ್ಜಿ ನೀಡಿದ ಹಲವು ಕುಟುಂಬಗಳಿಗೆ ಹಕ್ಕುಪತ್ರ ಸಿಕ್ಕಿಲ್ಲ. ವಿತರಣೆ ವಿಳಂಬ ಆಗುತ್ತಿದೆ ಎಂದು ಅಚ್ಚುತ್ತ ಮೆಲ್ಕಜೆ ಹೇಳಿದರು. ಇದಕ್ಕೆ ಉತ್ತರಿಸಿದ ತಹಸೀಲ್ದಾರ್ ಅವರು ಹಕ್ಕುಪತ್ರ ವಿತರಣೆಗೆ 300 ಅರ್ಜಿಗಳು ಬಾಕಿ ಇದೆ. ಅದರ ಕೆಲಸ ಆಗುತ್ತಿದೆ. ಕೂಡಲೇ ವಿತರಣೆ ಮಾಡುತ್ತೇನೆ ಎಂದು ಹೇಳಿದರು.
ಸುಳ್ಯ ನಗರದ ಪುಟ್ಪಾತ್ ಬದಿಗಳಲ್ಲಿ ಇರುವ ಅಂಗಡಿಗಳನ್ನು ತೆರವುಗೊಳಿಸಬೇಕು. ಇದಕ್ಕೆ ನಗರ ಪಂಚಾಯಿತಿ ಸರಿಯಾದ ಪ್ರಮಾಣದಲ್ಲಿ ತೆರಿಗೆ ವಶಪಡಿಸಿಕೊಳ್ಳುತ್ತಿಲ್ಲ ಎಂದು ದಾಸಪ್ಪ ಅಜ್ಜಾವರ ಹೇಳಿದರು. ಇದರ ಬಗ್ಗೆ ದೂರು ಕೊಡಿ ತೆಗೆಸುವ ಕೆಲಸ ಮಾಡಿಸುತ್ತೇವೆ ಎಂದು ವೃತ್ತ ನಿರೀಕ್ಷಕ ಸತೀಶ್ ಕುಮಾರ್ ನಗರ ಪಂಚಾಯಿತಿಗೆ ತಿಳಿಸಿದರು.
ತಾಲೂಕಿನ ಹಲವು ಗ್ರಾಮ ಪಂಚಾಯಿತಿಗಳಲ್ಲಿ ಕ್ಯಾಂಪೋಸ್ಟ್ ಪೈಪ್ ಹಗರಣ ನಡೆದಿದೆ. ಇದರ ಬಗ್ಗೆ ಕೂಲಂಕೂಷ ತನಿಖೆ ನಡೆಸಬೇಕು. ಅಲ್ಲದೇ ಬ್ಯಾಂಕ್ಗಳಲ್ಲಿ ವಿದ್ಯಾರ್ಥಿಗಳಿಗೆ ಶಿಕ್ಷಣದ ಮೇಲೆ ಸಾಲ ಸಿಗುತ್ತಿಲ್ಲ. ಬ್ಯಾಂಕಿನ ಅಧಿಕಾರಿಗಳು ದಲಿತರನ್ನು ಸತಾಯಿಸುತ್ತಿದ್ದಾರೆ ಎಂದು ಆನಂದ ಬೆಳ್ಳಾರೆ ಹೇಳಿದರು.
ಸಭೆಯಲ್ಲಿ ತಾಲೂಕು ಪಂಚಾಯಿತಿ ಅಧ್ಯಕ್ಷ ಚನಿಯ ಕಲ್ತಡ್ಕ, ಸುಳ್ಯ ವೃತ್ತ ನಿರೀಕ್ಷಕ ಸತೀಶ್ ಕುಮಾರ್, ಕ್ಷೇತ್ರ ಸಮಾಜ ಕಲ್ಯಾಣಾಧಿಕಾರಿ ಚಂದ್ರಶೇಖರ್ ಪೇರಾಲು, ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಯೋಜನಾಧಿಕಾರಿ ಭವಾನಿಶಂಕರ್, ಬೆಳ್ಳಾರೆ ಠಾಣಾ ಉಪ ವೃತ್ತ ನಿರೀಕ್ಷಕ ಈರಯ್ಯ, ಸುಬ್ರಹ್ಮಣ್ಯ ಠಾಣಾಧಿಕಾರಿ ಗೋಪಾಲ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು, ಮುಖಂಡರು ಉಪಸ್ಥಿತರಿದ್ದರು.