ಬಂಟ್ವಾಳ, ಜು 25: ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ನೇತೃತ್ವದ ಸಮ್ಮಿಶ್ರ ಸರಕಾರದ ನೂತನ ಬಜೆಟ್ನಲ್ಲಿ ರಾಜ್ಯದ ಅಲ್ಪಸಂಖ್ಯಾತ ಸಮುದಾಯವನ್ನು ಕಡೆಗಣಿಸಲಾಗಿದೆ ಎಂದು ಆರೋಪಿಸಿ ಎಸ್ಡಿಪಿಐ ಬಂಟ್ವಾಳ ವಿಧಾನಸಭಾ ಕ್ಷೇತ್ರದ ವತಿಯಿಂದ ಬಿ.ಸಿ.ರೋಡಿನ ಮಿನಿವಿಧಾನ ಸೌಧದ ಮುಂಭಾಗದಲ್ಲಿ ಧರಣಿ ನಡೆಯಿತು.
ಎಸ್ಡಿಪಿಐ ಜಿಲ್ಲಾ ಕಾರ್ಯದರ್ಶಿ ಇಕ್ಬಾಲ್ ಬೆಳ್ಳಾರೆ ಧರಣಿನಿರತರನ್ನು ಉದ್ದೇಶಿಸಿ ಮಾತನಾಡಿ, ರಾಜ್ಯ ಬಜೆಟ್ನಲ್ಲಿ ಅಲ್ಪಸಂಖ್ಯಾತ ಸಮುದಾಯವನ್ನು ಕಡೆಗಣನೆ ಮಾಡಿರುವುದು ಖಂಡನೀಯ. ಕೇವಲ ಜೆಡಿಎಸ್ ಬಾಹುಳ್ಯವಿರುವ ಹಾಗೂ ನಿರ್ದಿಷ್ಟ ಸಮುದಾಯಕ್ಕೆ ಮಾತ್ರ ಈ ಬಜೆಟ್ ಸೀಮಿತವಾಗಿದೆ. ಅಲ್ಲದೆ, ಬಜೆಟ್ನಲ್ಲಿ ಅಲ್ಪ ಸಂಖ್ಯಾತ ಸಮುದಾಯಕ್ಕೆ ಯಾವುದೇ ರೀತಿಯಾದ ಹೊಸ ಯೋಜನೆಯನ್ನೂ ಕೂಡಾ ಜಾರಿಗೊಳಿಸಿಲ್ಲ ಎಂದು ಆರೋಪಿದರು. ಎಸ್ಡಿಪಿಐ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಾಹುಲ್ ಎಸ್.ಎಚ್. ಮಾತನಾಡಿ, ರಾಜ್ಯದ ಅಲ್ಪಸಂಖ್ಯಾತರ ಪೈಕಿ ಮುಸ್ಲಿಂ ಸಮುದಾಯದಲ್ಲಿ ಬಡತನ, ನಿರುದ್ಯೋಗ ಹಾಗೂ ಅನಕ್ಷರತೆಯಿದೆ. ಈ ಸತ್ಯಾಂಶವನ್ನು ಜಸ್ಟೀಸ್ ರಾಜೇಂದ್ರ ಸಿಂಗ್ ಸಾಚಾರ್ ಮತ್ತು ರಂಗನಾಥ್ ಮಿಶ್ರಾ ಆಯೋಗದ ವರದಿಗಳಲ್ಲಿ ಸಾಬೀತಾಗಿದೆ ಎಂದ ಅವರು, ಅಲ್ಪ ಸಂಖ್ಯಾತರ ಶ್ರೇಯೋಭಿವೃದ್ಧಿಗಾಗಿ ವಿಶೇಷ ಬಜೆಟ್ ಅನುದಾನ ನೀಡಬೇಕಾಗಿ ಒತ್ತಾಯಿಸಿದರು.