ಉಡುಪಿ, ಜು 25: ಸರ್ವ ಕಾಲೇಜು ವಿದ್ಯಾರ್ಥಿ ಸಂಘ ಉಡುಪಿ ಜಿಲ್ಲೆ ಇದರ ಆಶ್ರಯದಲ್ಲಿ ಸಂಪೂರ್ಣ ಕ್ಯಾರಿ ಓವರ್ ಪದ್ಧತಿ ಜಾರಿಗೆ ಹಾಗೂ ಖಾಸಗಿ ಶಾಲಾ ಕಾಲೇಜುಗಳ ಬಡ ವಿದ್ಯಾರ್ಥಿಗಳಿಗೆ ಉಚಿತ ಬಸ್ಪಾಸ್ ನೀಡುವಂತೆ ಆಗ್ರಹಿಸಿ ಉಡುಪಿಯ ವಿವಿಧ ಪಾಲಿಟೆಕ್ನಿಕ್ ಕಾಲೇಜುಗಳ ವಿದ್ಯಾರ್ಥಿಗಳು ಮಣಿಪಾಲ ಈಶ್ವರ ನಗರ ಬಸ್ ನಿಲ್ದಾಣದಲ್ಲಿ ಧರಣಿ ನಡೆಸಿದರು.
ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಸಂಘದ ರಾಜ್ಯಾಧ್ಯಕ್ಷ ದಿನಕರ ಶೆಟ್ಟಿ, ಕ್ಯಾರಿ ಓವರ್ ಪದ್ಧತಿಯಿಂದ ಪಾಲಿಟೆಕ್ನಿಕ್ ವಿದ್ಯಾರ್ಥಿಗಳು ಸಮಸ್ಯೆ ಅನುಭವಿಸುತ್ತಿದ್ದಾರೆ. ಇದರಿಂದ ಪ್ರತಿವರ್ಷ ಸಾವಿರಾರು ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಪಾಲಿಟೆಕ್ನಿಕ್ ವಿದ್ಯಾರ್ಥಿಗಳು ಈ ದೇಶದ ಬೆನ್ನೆಲುಬು. ಇವರಿಂದ ಮಾತ್ರ ದೇಶದ ತಂತ್ರಜ್ಞಾನ ಅಭಿವೃದ್ಧಿ ಸಾಧ್ಯ. ಆದುದರಿಂದ ಪಾಲಿಟೆಕ್ನಿಕ್ ವಿದ್ಯಾರ್ಥಿಗಳಿಗೆ ಸಂಪೂರ್ಣ ಕ್ಯಾರಿ ಓವರ್ ನೀಡಬೇಕೆಂದು ಆಗ್ರಹಿಸಿದರು.
ಸರಕಾರಿ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳಿಗೆ ಮಾತ್ರ ಬಸ್ ಪಾಸ್ ನೀಡುವ ಸರಕಾರ, ಮೊದಲು ಸರಕಾರಿ ವಿದ್ಯಾ ಸಂಸ್ಥೆಗಳಿಗೆ ಬೇಕಾದ ಮೂಲ ಭೂತ ಸೌರ್ಕಯಗಳನ್ನು ಒದಗಿಸುವ ಕೆಲಸ ಮಾಡಬೇಕು. ಖಾಸಗಿ ಕಾಲೇಜುಗಳ ವಿದ್ಯಾರ್ಥಿಗಳು ಸಾಲ ಮಾಡಿ ಶಿಕ್ಷಣ ಪಡೆಯುತ್ತಿದ್ದಾರೆ. ಇಲ್ಲಿಯೂ ಬಡವರಿದ್ದಾರೆ. ಪ್ರತಿದಿನ ಸಾಕಷ್ಟು ಹಣ ವ್ಯಯ ಮಾಡಿ ಶಾಲೆಗಳಿಗೆ ಬರುವ ಪರಿಸ್ಥಿತಿ ರಾಜ್ಯದಲ್ಲಿದೆ. ಆದುದರಿಂದ ಖಾಸಗಿ ಶಾಲೆಯಲ್ಲಿರುವ ಬಡವರಿಗೆ ಬಸ್ಪಾಸ್ ನೀಡಬೇಕು ಎಂದು ಅವರು ಒತ್ತಾಯಿಸಿದರು.