ಕುಂದಾಪುರ, ಜು 26 : ಚತುಷ್ಪಥ ಕಾಮಗಾರಿಯ ಯಡವಟ್ಟುಗಳು ಒಂದೇರಡಲ್ಲ. ಒಂದೊಂದೇ ಅಸಮರ್ಪಕ ಕಾಮಗಾರಿಗಳು ದರ್ಶನವಾಗುತ್ತಲೇ ಇರುತ್ತಿವೆ. ಈಗ ನಿರ್ಮಾಣ ಮಾಡಿರುವ ನವಯುಗ ಸಂಸ್ಥೆ ಅಧೀನದ ಹೆದ್ದಾರಿಯ ನಡುವೆ ನಿರ್ಮಿಸಿರುವ ಡಿವೈಡರ್ ನಡುವೆ ನೀರು ಹೋಗಲು ಇಟ್ಟಿರುವ ತೋಡು ಅವೈಜ್ಞಾನಿಕತೆಯಿಂದ ಕೂಡಿದ್ದಾಗಿದ್ದು, ಅಗಲವಾಗಿ ತೋಡು ನಿರ್ಮಾಣ ಮಾಡಿರುವುದರಿಂದ ದ್ವಿಚಕ್ರ ವಾಹನ ಸವಾರರು ಸುಲಭವಾಗಿ ರಸ್ತೆ ಕ್ರಾಸ್ ಮಾಡಲು ಇದರೊಳಗೆ ನುಗ್ಗಿ ಅಪಾಯವನ್ನು ಆಹ್ವಾನಿಸಿಕೊಳ್ಳುತ್ತಿದ್ದಾರೆ. ನವಯುಗ ಸಂಸ್ಥೆ ಅವೈಜ್ಞಾನಿಕವಾಗಿ ತೋಡುಗಳ ನಿರ್ಮಾಣ ಮಾಡಿರುವುದು ಈ ಗ್ಯಾಪ್ನಲ್ಲಿ ದ್ವಿಚಕ್ರ ವಾಹನಗಳ ಸಂಚರಿಸಿದಂತೆ ಮಾಡಲು ಕನಿಷ್ಠ ಜಾಲರಿಯನ್ನು ಅಳವಡಿಸದಿರುವುದು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ.
ಕುಂಭಾಸಿಯಲ್ಲಿ ಸಂಭವಿಸಿದ ಬೈಕ್ ಅಪಘಾತವೂ ಕೂಡಾ ಡಿವೈಡರ್ನ ಗ್ಯಾಪ್ನಿಂದಾಗಿಯೇ ಆಗಿದ್ದಾಗಿದೆ. ಇಂಥಹ ಹಲವಾರು ಅಪಘಾತಗಳು ಸಂಭವಿಸಿವೆ. ಬೈಕ್ನವರು ರಸ್ತೆಯ ಇನ್ನೊಂದು ಭಾಗಕ್ಕೆ ಹೋಗಲು ಇಂಥಹ ಅಸುರಕ್ಷಿತವಾದ ಮಾರ್ಗಗಳನ್ನು ಬಳಸಿ ಹಿಂದೆ ಮುಂದೆ ನೋಡದೆ ಚಲಿಸುತ್ತಾರೆ. ಇದು ಕಾನೂನು ಬಾಹಿರವಾದರೂ ಬೈಕ್ ಸವಾರರ ಅರಿವಿನ ಕೊರತೆಯೋ ಅಥವಾ ನಿರ್ಲಕ್ಷ್ಯತನದಿಂದಲೋ ಇಂಥಹ ಪ್ರಕರಣಗಳು ನಡೆಯುತ್ತಲೇ ಇರುತ್ತದೆ. ಇಂಥಹದ್ದಕ್ಕೆ ಹೆದ್ದಾರಿಯಲ್ಲಿ ಅವಕಾಶವೇ ಕೊಡಬಾರದು. ಡಿವೈಡರ್ ನಿರ್ಮಾಣದ ಸಂದರ್ಭ ಬೈಕ್ ಪ್ರವೇಶಿಸದ ರೀತಿಯಲ್ಲಿ ಅಡ್ಡ ತೋಡುಗಳನ್ನು ಮಾಡಿದರೆ ಸಮಸ್ಯೆಯೇ ಇರುವುದಿಲ್ಲ.
ಈಗ ನಿರ್ಮಾಣವಾಗಿರುವ ಚತುಷ್ಪಥದ ಉದ್ದಕ್ಕೂ ಅವೈಜ್ಞಾನಿಕವಾಗಿ ಡಿವೈಡರ್ ನಡುವೆ ಗ್ಯಾಪ್ ಬಿಟ್ಟಿರುವುದನ್ನು ಕಾಣಬಹುದಾಗಿದೆ. ಸಂಬಂಧಪಟ್ಟ ಕಂಪೆನಿಯೂ ಕೂಡಾ ಆ ಬಗ್ಗೆ ಗಮನ ಹರಿಸುವುದಿಲ್ಲ. ಇಂಥಹ ಗ್ಯಾಪ್ನೊಳಗೆ ಕಾನೂನುಬಾಹಿರವಾಗಿ ಬೈಕ್ಗಳನ್ನು ಚಲಿಸಿಕೊಂಡು ಹೋಗುತ್ತಿರುವುದು ಕಂಡರೂ ಕೂಡಾ ಕ್ರಮಕ್ಕೆ ಮುಂದಾಗುತ್ತಿಲ್ಲ. ಜನರೂ ಕೂಡಾ ಸುಲಭ ಮಾರ್ಗವೆಂದು ಇಂಥಹ ಅಪಾಯಕಾರಿಯಾದ, ಅಸುರಕ್ಷಿತ ಮಾರ್ಗದಲ್ಲಿ ಹೋಗುತ್ತಾರೆ. ಇದರ ತಡೆಯಾಗಬೇಕಾದರೆ ಅಂಥಹ ಬೈಕ್ ಪ್ರವೇಶ ಮಾಡುವಂತಿರುವ ಗ್ಯಾಪ್ಗಳಲ್ಲಿ ಎರಡು ಕಡೆ ಕಬ್ಬಿಣದ ಜಾಲರಿಗಳನ್ನು ಅಳವಡಿಸಬಹುದಾಗಿದೆ. ಅಥವಾ ಈಗ ಇರುವ ಗ್ಯಾಪ್ಗಳನ್ನು ಕಡಿಮೆ ಮಾಡಬಹುದು.
ಚತುಷ್ಪಥ ನಿರ್ಮಾಣದ ಸಂದರ್ಭ ಜನರ ಸುರಕ್ಷತೆಯ ದೃಷ್ಟಿಯಿಂದ ಅನುಸರಿಸುವ ಕ್ರಮಗಳನ್ನು ಕಂಪನಿಗಳು ಪಾಲಿಸಬೇಕು. ಆದರೆ ಉಡುಪಿ ಜಿಲ್ಲೆಯಲ್ಲಿ ಅಂಥಹ ಯಾವುದೇ ನಿಯಮ ಪಾಲನೆಗಳನ್ನು ಕಂಪನಿಗಳು ಮಾಡುತ್ತಿಲ್ಲ. ರಸ್ತೆಗಳು ಹೊಂಡ ಬಿದ್ದರೂ ಅದರ ಗೋಜಿಗೆ ಹೋಗದ ಕಂಪೆನಿಗಳು ಟೋಲ್ ಸಂಗ್ರಹದಲ್ಲಿಯೇ ಹೆಚ್ಚಿನ ಆಸಕ್ತಿ ವಹಿಸುತ್ತಿದೆ. ಡಿವೈಡರ್ ನಡುವೆ ಅಗತ್ಯಕ್ಕಿಂತ ಹೆಚ್ಚು ಗ್ಯಾಪ್ ಬಿಟ್ಟಿರುವುದು ಬೈಕ್ ಸವಾರರಿಗೆ ಅಧಿಕೃತ ಮಾರ್ಗದಂತಾಗಿದೆ. ಬೇಗ ಹೋಗಬಹುದು ಅದರಲ್ಲಿಯೇ ನುಗ್ಗುತ್ತಾರೆ. ಇನ್ನೊಂದು ಕಡೆಯಿಂದ ವೇಗವಾಗಿ ಬರುವ ವಾಹನ ಇದಕ್ಕೆ ಡಿಕ್ಕಿ ಹೊಡೆಯುತ್ತದೆ. ಪ್ರಾಣಾಪಾಯ ಸಂಭವಿಸುತ್ತದೆ. ಇದಕ್ಕೆ ಹೊಣೆ ಅಜಾಗರೂಕ ಚಾಲನೆಯೇ ಕಾರಣ ಎಂದು ದೂರಲಾಗುತ್ತದೆ. ಆದರೆ ಇಲ್ಲಿ ಅಗತ್ಯಕ್ಕಿಂತ ಹೆಚ್ಚು ಸ್ಥಳವಕಾಶ ಬಿಟ್ಟಿರುವುದನ್ನು ಯಾರೂ ಪ್ರಶ್ನೆ ಮಾಡುವುದಿಲ್ಲ.
ಡಿವೈಡರ್ಗಳ ನಿರ್ಮಾಣವೂ ಕೂಡಾ ಅವೈಜ್ಞಾನಿಕವಾಗಿದ್ದು ಈ ಬಗ್ಗೆ ಕೂಡಾ ಯಾರೂ ಚಕಾರ ಎತ್ತುತ್ತಿಲ್ಲ. ಹೆದ್ದಾರಿಯಲ್ಲಿ ಎರ್ರಾಬಿರ್ರಿಯಾಗಿ ಡಿವೈಡರ್ ಪಾಸ್ ಮಾಡುವುದು ಪ್ರಾಣಾಪಾಯ ಎಂದೂ ಗೊತ್ತಿದ್ದರೂ ಕೂಡಾ ತಿಳಿದವರೇ ಇಂಥಹ ಕೆಲಸ ಮಾಡುತ್ತಲೇ ಇರುತ್ತಾರೆ. ಈ ಬಗ್ಗೆ ಸಂಬಂಧಪಟ್ಟ ಕಂಪನಿಯನ್ನು ಎಚ್ಚರಿಸುವ ಕೆಲಸ ಆಗಬೇಕಾಗಿದೆ.