ಬೆಳ್ತಂಗಡಿ , ಜು 26: ಎರಡು ದಿನಗಳ ಹಿಂದೆ ರಾಜ್ಯ ರಾಜಧಾನಿಯ ಬೆಂಗಳೂರಿನ ಹೂಡಿಯಿಂದ ಕಾಣೆಯಾಗಿದ್ದ ಬಾಲಕ ಜು ೨೬ ರ ಗುರುವಾರ ಬೆಳ್ತಂಗಡಿಯ ಗುರುವಾಯನಕೆರೆಯಲ್ಲಿ ಶವವಾಗಿ ಪತ್ತೆಯಾಗಿದ್ದಾನೆ. ಬುಧವಾರ ಸಂಜೆಯಷ್ಟೇ ಕೆರೆಯ ದಡದಲ್ಲಿ ಅನುಮಾಸ್ಪದ ರೀತಿಯಲ್ಲಿ ಚಪ್ಪಲಿ ಹಾಗೂ ಬ್ಯಾಗ್ ಬುಧವಾರ ಸಾಂಜೆ ಪತ್ತೆಯಾಗಿತ್ತು. ಬ್ಯಾಗ್ ನಲ್ಲಿ ದೊರೆತ ಕೆಲವು ಮಾಹಿತಿಯಿಂದ ಅದರ ವಾರೀಸುದಾರ ಬಾಲಕನಿಗಾಗಿ ಸ್ಥಳೀಯರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿಗಳು ರಾತ್ರಿಯವರೆಗೆ ಕೆರೆಯಲ್ಲಿ ಹುಡುಕಾಟ ನಡೆಸಿದರೂ ಬಾಲಕ ಪತ್ತೆಯಾಗಿರಲಿಲ್ಲ. ಈ ನಡುವೆ ಬಾಲಕ ಸ್ಕೂಲ್ ಬ್ಯಾಗ್ ಇರಿಸಿ ಬೇರೆಡೆ ಹೋಗಿರುವ ಶಂಕೆಯೂ ವ್ಯಕ್ತವಾಗಿತ್ತು, ಆದರೆ ಗುರುವಾರ ಬೆಳಗ್ಗೆ ಬಾಲಕ ಯಶವಂತ್ಸಾಯಿಯ ಮೃತದೇಹ ಕೆರೆಯಲ್ಲಿ ಕಾಣಿಸಿದೆ.
ಮೃತ ಬಾಲಕ ಬೆಂಗಳೂರಿನ ಹೂಡಿ ಬಳಿ ತನ್ನ ಅಜ್ಜಿ ತಾತನ ಮನೆಯಲ್ಲಿ ವಾಸವಿದ್ದ. ಆದರೆ ಅವನ ಪಾಲಕರು ಆಂಧ್ರಪ್ರದೇಶದ ಕುಪ್ಪಂನಲ್ಲಿ ವಾಸವಿದ್ದರು. ಜು. 24 ರಂದು ಶಾಲೆಗೆ ಹೋಗಿ ಬರುವುದಾಗಿ ಹೇಳಿ ಹೊರಟಿದ್ದ ಬಾಲಕ ಮನೆಗೆ ಮರಳಿರಲಿಲ್ಲ. ಹಾಗಾಗಿ ಬಾಲಕನ ತಾತ ತ್ಯಾಗರಾಜ್ ಮಹದೇವಪುರ ಠಾಣೆಯಲ್ಲಿ ಮೊಮ್ಮಗ ನಾಪತ್ತೆಯಾಗಿರುವ ಬಗ್ಗೆ ದೂರು ದಾಖಲಿಸಿದ್ದರು. ಈತ ಬೆಂಗಳೂರಿನ ಐಟಿಐ ವಿದ್ಯಾಮಂದಿರ ಹೈಸ್ಕೂಲ್ ವಿದ್ಯಾರ್ಥಿಯಾಗಿದ್ದ. ನಿನ್ನೆ ಪತ್ತೆಯಾದ ಬ್ಯಾಗ್ನಲ್ಲಿ ಐಡಿ ಕಾರ್ಡ್, ಆಧಾರ್ ಕಾರ್ಡ್, ಬಸ್ ಟಿಕೆಟ್ ಪತ್ತೆಯಾಗಿದ್ದು, ಸದ್ಯ ಬೆಳ್ತಂಗಡಿ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.