ಮಂಗಳೂರು, ಜು ೨೬: ಹೊರವಲಯದ ಮೂಡುಶೆಡ್ಡೆಯಲ್ಲಿ ಗೋ ಕಳ್ಳತನ ಪ್ರಕರಣವನ್ನು ಖಂಡಿಸಿ ಭಜರಂಗದಳದಿಂದ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಯಿತು. ವಿಶ್ವ ಹಿಂದೂ ಪರಿಷತ್, ಭಜರಂಗದಳ, ಮಾತೃಶಕ್ತಿ ದುರ್ಗಾವಾಹಿನಿಯವರು ಬೃಹತ್ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಇನ್ನು ಮೂಡುಶೆಡ್ಡೆ ಶ್ರೀರಾಮ ಭಜನಾ ಮಂದಿರದಿಂದ ವಾಮಂಜೂರುವರೆಗೆ ಪ್ರತಿಭಟನಾ ರ್ಯಾಲಿ ನಡೆಯಿತು. ಮೂಡುಶೆಡ್ಡೆ ಶ್ರೀರಾಮ ಭಜನಾ ಮಂದಿರದ ಬಳಿ ರ್ಯಾಲಿಗೆ ಚಾಲನೆ ನೀಡಲಾಯಿತು. ಬಳಿಕ ಪ್ರತಿಭಟನಾ ಸಭೆ ಕೂಡ ನಡೆಯಿತು. ಈ ಸಂದರ್ಭ ಮಾತನಾಡಿದ ಸಂಘಟನೆ ಮುಖಂಡ ಮುರಳಿಕೃಷ್ಣ ಹಂಸತಡ್ಕ, ''ಗೋ ರಕ್ಷಣೆಗೋಸ್ಕರ ಮತ್ತೊಂದು ಸ್ವಾತಂತ್ರ್ಯ ಸಂಗ್ರಾಮ ನಡೆಯುತ್ತದೆ. ಹಿಂದೂ ಮಹಿಳೆಯರು ಮನೆಯಲ್ಲಿ ತಲ್ವಾರು ಹಿಡಿಯಬೇಕಾಗುತ್ತದೆ. ಒಂದು ಕೆನ್ನೆಗೆ ಹೊಡೆದರೆ ನಾವು ಹತ್ತು ಬಾರಿ ಹೊಡೆಯುತ್ತೇವೆ. ಗೋಕಳ್ಳತನ ಮುಂದುವರೆದಲ್ಲಿ ಅವರ ವಿರುದ್ಧ ಸಂಘಟನೆಯಿಂದಲೇ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು. ಗೋಕಳ್ಳತನ ಮುಂದುವರೆದಲ್ಲಿ ಗಲ್ಲಿ ಗಲ್ಲಿಗಳಲ್ಲಿ ರಕ್ತಪಾತ ನಡೆಯಲಿದೆ'' ಎಂದರು.
ಇನ್ನು ಇದೇ ಸಂದರ್ಭ ಮಾತನಾಡಿದ ಭಜರಂಗದಳ ಮುಖಂಡ ಶರಣ್ ಪಂಪ್ ವೆಲ್, ''ಮಂಗಳೂರಲ್ಲಿ ಗೋರಕ್ಷಕ ದಳ ರಚನೆ ಸಂಬಂಧಿಸಿ ಪೊಲೀಸ್ ಕಮೀಷನರ್ ಗೆ ಎಸ್ ಡಿಪಿಐ ಜಿಲ್ಲಾಧ್ಯಕ್ಷ ಮನವಿ ಮಾಡಿದ್ದಾರೆ. ಭಜರಂಗದಳ, ವಿಎಚ್ ಪಿ ವಿರುದ್ಧ ಕ್ರಮ ತೆಗೆದುಕೊಳ್ಳಲು ಹೇಳಿದ್ದಾರೆ. ಈಗ ನಾವು ಎಸ್ ಡಿಪಿಐ ಮೇಲೆ ಸಂಶಯ ಪಡಬೇಕಾಗುತ್ತದೆ. ಎಸ್ ಡಿಪಿಐಯವರು ಯಾಕೆ ನಮ್ಮ ದಳದ ವಿರುದ್ಧ ಮನವಿ ಕೊಡಬೇಕು..? ಸಾನಿಯಾ ಮಿರ್ಜಾ ವಿರುದ್ಧ ಫತ್ವಾ ಹಾಕುತ್ತೀರಿ. ಅದೇ ರೀತಿ ಗೋಕಳ್ಳತನ ಮಾಡುವವರ ವಿರುದ್ಧ ಫತ್ವಾ ಹೊರಡಿಸಿ'' ಎಂದು ಅವರು ಹೇಳಿದರು. ಇನ್ನು ಪ್ರತಿಭಟನಾ ಮೆರವಣಿಗೆ ಸಂದರ್ಭ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.