ಬೆಳ್ತಂಗಡಿ, ಜು 26: ನಾಪತ್ತೆಯಾಗಿದ್ದ ಬೆಂಗಳೂರು ಮೂಲದ ಹೈಸ್ಕೂಲ್ ಬಾಲಕನ ಮೃತದೇಹ ಗುರುವಾರ ಮುಂಜಾನೆ ಗುರುವಾಯನಕೆರೆ ಪೇಟೆ ಸನಿಹದ ಕೆರೆಯಲ್ಲಿ ಪತ್ತೆಯಾಗಿದ್ದು ಬೆಳ್ತಂಗಡಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಬಾಲಕ ಆತ್ಮಹತ್ಯೆ ಮಾಡಿಕೊಳ್ಳಲು ಬ್ಲೂವೇಲ್ ಆಟವೇ ಕಾರಣವೆಂದು ಶಂಕೆ ವ್ಯಕ್ತವಾಗಿದ್ದರೂ ಪೋಲಿಸರು ಅದು ಅಲ್ಲವೆಂದು ಖಚಿತಪಡಿಸಿದ್ದಾರೆ.
ಒಂಭತ್ತನೇ ತರಗತಿಯ ವಿದ್ಯಾರ್ಥಿಯಾಗಿದ್ದ ಈತ ಪರೀಕ್ಷೆಯಲ್ಲಿ ಅನುತೀರ್ಣನಾಗುತ್ತಿದ್ದ. ಇದರಿಂದ ಹೆತ್ತವರು ಅಸಮಾಧಾನಗೊಂಡಿದ್ದರು. ಈ ಹಿನ್ನೆಲೆ ಮನನೊಂದು ಬಾಲಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಮೇಲ್ನೋಟಕ್ಕೆ ಸ್ಪಷ್ಟವಾಗಿದೆ. ಜು.೨೫ರಂದು ಗುರುವಾಯನಕೆರೆ ಬಳಿಯ ಕೆರೆ ಬಳಿ ವಿದ್ಯಾರ್ಥಿಯ ಸ್ಕೂಲ್ ಬ್ಯಾಗ್, ಶೂ ಪತ್ತೆಯಾಗಿದ್ದು ಈ ಬಗ್ಗೆ ಕೆರೆಗೆ ಹಾರಿರಬಹುದು ಎಂದು ಶಂಕಿಸಿ ಸ್ಥಳೀಯರು ಹಾಗೂ ಅಗ್ನಿಶಾಮಕದಳ ಹುಡುಕಾಟ ನಡೆಸಿದ್ದು ಆದರೆ ಕೆರೆಯಲ್ಲಿ ಅಧಿಕ ನೀರು ಇದ್ದುದರಿಂದ ಹುಡುಕಾಟವನ್ನು ನಿಲ್ಲಿಸಿ ಮತ್ತೆ ಇಂದು ಮುಂದುವರಿಸಲು ಚಿಂತಿಸಿದ್ದರು. ಆದರೆ ಇಂದು ಬೆಳಿಗ್ಗೆ ಮೃತದೇಹ ಕೆರೆಯಲ್ಲಿ ತೇಲುತ್ತಿರುವುದನ್ನು ಸ್ಥಳೀಯರು ನೋಡಿ ಪೋಲಿಸರಿಗೆ ಸುದ್ದಿ ಮುಟ್ಟಿಸಿದ್ದಾರೆ. ಬಳಿಕ ಬೆಳ್ತಂಗಡಿ ಪೋಲೀಸರು, ಅಗ್ನಿಶಾಮಕದಳ ಮೃತದೇಹವನ್ನು ನೀರಿನಿಂದ ಮೇಲಕ್ಕೆತ್ತಿ ಮರಣೋತ್ತರ ಪರೀಕ್ಷೆ ಬಳಿಕ ಪೋಷಕರಿಗೆ ಮೃತದೇಹವನ್ನು ಹಸ್ತಾಂತರಿಸಿದ್ದಾರೆ. ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.