ಮಂಗಳೂರು, ಜು 27: ಕರಾವಳಿ ಕ್ರೈಸ್ತರ ಪ್ರೀತಿಪಾತ್ರ ಸಂತರೆಂದೇ ಖ್ಯಾತಿಯನ್ನು ಹೊಂದಿರುವ ಪವಾಡ ಪುರುಷ ಸಂತ ಲಾರೆನ್ಸರ ಪುಣ್ಯಕ್ಷೇತ್ರ ಮಂಗಳೂರಿನ ಬೊಂದೇಲ್, ಇದರ ವಾರ್ಷಿಕ ಮಹೋತ್ಸವ ಆಗಸ್ಟ್ 10ರ ಶುಕ್ರವಾರದಂದು ನಡೆಯಲಿದೆ ಎಂದು ಪುಣ್ಯಕ್ಷೇತ್ರದ ಪ್ರಧಾನ ಧರ್ಮಗುರು ವಂದನೀಯ ಆಂಡ್ರೂ ಲಿಯೋ ಡಿ ಸೋಜ ಹೇಳಿದ್ದಾರೆ.
ಕ್ಷೇತ್ರದಲ್ಲಿ ಆಯೋಜಿಸಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಕ್ಷೇತ್ರದ ವಾರ್ಷಿಕ ಮಹೋತ್ಸವದ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿದ ಬಳಿಕ ಮಾತನಾಡಿದ ಅವರು “ಜುಲೈ 31ರಿಂದ ಆಗಸ್ಟ್ 10ರವರೆಗೆ ಕ್ಷೇತ್ರದಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ವಾರ್ಷಿಕ ಮಹೋತ್ಸವ ಹಿನ್ನೆಲೆ ಜುಲೈ 31ರಂದು ಸಂಜೆ 5 ಗಂಟೆಗೆ ಮೇರಿಹಿಲ್ ಕಾರ್ಮೆಲ್ ಸೆಂಟ್ರಲ್ ಸ್ಕೂಲ್ ಮೈದಾನದಿಂದ ಬೊಂದೇಲ್ ಚರ್ಚಿಗೆ ಹೊರೆ ಕಾಣಿಕೆ ಮೆರವಣಿಗೆ ನಡೆಯಲಿದೆ. ಆಗಸ್ಟ್ 1ರಂದು ಬೆಳಿಗ್ಗೆ 10.30ಕ್ಕೆ ಕ್ಷೇತ್ರದ ಆವರಣದಲ್ಲಿ ಧ್ವಜಾರೋಹಣ ನೆರವೇರಲಿದೆ. ನಂತರ 9 ದಿನಗಳ ನೊವೆನಾ ಪ್ರಾರ್ಥನೆಯ ಉದ್ಘಾಟನೆ ನಡೆಯಲಿದೆ” ಎಂದು ಅವರು ತಿಳಿಸಿದ್ದಾರೆ.
ಆಗಸ್ಟ್ 1ರಿಂದ ನೊವೆನಾ ಪ್ರಾರ್ಥನೆ:
ಆಗಸ್ಟ್ 1ರಿಂದ 9ರ ತನಕ ಪ್ರತಿದಿನ ಬೆಳಿಗ್ಗೆ 11 ಗಂಟೆಗೆ ಹಾಗೂ ಸಂಜೆ 6 ಗಂಟೆಗೆ ಬಲಿಪೂಜೆ, ನೊವೆನಾ ಪ್ರಾರ್ಥನೆ, ರೋಗಿಗಳಿಗಾಗಿ ವಿಶೇಷ ಪ್ರಾರ್ಥನೆಗಳು ನಡೆಯಲಿವೆ. ನೊವೆನಾ ಸಂದರ್ಭದಲ್ಲಿ ಮಧ್ಯಾಹ್ನ ಅನ್ನ ಸಂತರ್ಪಣೆ ವ್ಯವಸ್ಥೆಯನ್ನು ಪುಣ್ಯಕ್ಷೇತ್ರದಲ್ಲಿ ಮಾಡಲಾಗಿದೆ.
ವಾರ್ಷಿಕ ಮಹೋತ್ಸವ:
ಆಗಸ್ಟ್ 10ರ ಶುಕ್ರವಾರದಂದು ವಾರ್ಷಿಕ ಮಹೋತ್ಸವ ನಡೆಯಲಿದೆ. ಬೆಳಿಗ್ಗೆ 10.30ರ ಸಂಭ್ರಮದ ಬಲಿಪೂಜೆ ನಡೆಯಲಿದೆ. ಮಂಗಳೂರು ಧರ್ಮಾಧ್ಯಕ್ಷ ಅತೀ ವಂದನೀಯ ಅಲೋಶಿಯಸ್ ಪೌಲ್ ಡಿಸೋಜ ನೆರವೇರಿಸಲಿರುವರು. ಸಂಜೆ 6 ಗಂಟೆಯ ಬಲಿಪೂಜೆಯನ್ನು ಮಂಗಳೂರಿನ ನಿಯೋಜಿಯತ ಧರ್ಮಾಧ್ಯಕ್ಷ ಅತೀ ವಂದನೀಯ ಪೀಟರ್ ಪೌಲ್ ಸಲ್ಡಾನಾ ವಹಿಸಲಿದ್ದಾರೆ ಎಂದು ಕ್ಷೇತ್ರದ ಧರ್ಮಗುರುಗಳು ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಸಹಾಯಕ ಧರ್ಮಗುರುಗಳಾದ ಕ್ಲಿಫರ್ಡ್ ಸೈಮನ್ ಪಿಂಟೋ, ಲಿಯೋ ವೇಗಸ್, ಚರ್ಚ್ ಸಮಿತಿ ಪದಾಧಿಕಾರಿಗಳಾದ ಹನ್ಬರ್ಟ್ ಪಿಂಟೋ, ಫ್ರಾನ್ಸಿಸ್ ವೇಗಾಸ್, ಸ್ಟ್ಯಾನಿ ಆಳ್ವಾರಿಸ್ ಮೊದಲಾದವರಿದ್ದರು.