ವಿಟ್ಲ, ಜು 27 : ಅಕ್ರಮ ದನ ಸಾಗಾಟ ನಡೆಸುತ್ತಿದ್ದ ಬಗ್ಗೆ ಮಾಹಿತಿ ಪಡೆದ ವಿಟ್ಲ ಠಾಣಾ ಪೊಲೀಸರು ವಾಹನ, ಜಾನುವಾರು ಹಾಗೂ ಬಜರಂಗದಳದ ಕಾರ್ಯಕರ್ತನ ಸಹಿತ ಇಬ್ಬರನ್ನು ವಿಟ್ಲ ಪಡ್ನೂರು ಗ್ರಾಮದ ಕಡಂಬು ಜಂಕ್ಷನ್ ನಲ್ಲಿ , ಜು 26 ರ ರಾತ್ರಿ ಗುರುವಾರ ಬಂಧಿಸಿದ್ದಾರೆ.
ಬಂಧಿತರನ್ನು ವಿಟ್ಲ ಪಡ್ನೂರು ಗ್ರಾಮ ಪಡಾರು ಮನೆಯ ಕೃಷ್ಣ ಭಟ್ ಅವರ ಪುತ್ರ ಶಶಿ ಕುಮಾರ್ ಭಟ್ (48) , ಮತ್ತು ಕೊಲ್ನಾಡು ಗ್ರಾಮ ಕಟ್ಟತ್ತಿಲದ ಮಣ್ಣಗದ್ದೆಯ ಅಬ್ದುಲ್ ಹಾರಿಸ್ (21) ಎಂದು ಗುರುತಿಸಲಾಗಿದೆ. ಆರೋಪಿ ಶಶಿಕುಮಾರ್ ಬಜರಂಗದಳದ ಕಾರ್ಯಕರ್ತನಾಗಿದ್ದುಕೊಂಡು ಗೋವುಗಳನ್ನು ಅಕ್ರಮವಾಗಿ ಸಾಗಾಟ ಮಾಡುವ ಕೆಲಸ ಮಾಡುತ್ತಿರುತ್ತಾನೆ. ಅಬ್ದುಲ್ ಹಾರಿಸ್ ಎಂಬಾತನು ಈ ಹಿಂದೆ ಅಳಿಕೆ ಎಂಬಲ್ಲಿ ದನ ಕಳವು ಪ್ರಕರಣದಲ್ಲಿ ಭಾಗಿಯಾಗಿದ್ದ. ಅಲ್ಲದೆ ಕೊಣಾಜೆ ಠಾಣೆಯಲ್ಲಿ ಕೂಡ ಈತನ ವಿರುದ್ದ ಪ್ರಕರಣಗಳು ದಾಖಲಾಗಿರುತ್ತದೆ. ಜಾನುವಾರುಗಳನ್ನು ಸಾಗಾಣಿಕೆ ಮಾಡಲು ವಾಹನದ ಬಾಡಿಯನ್ನು ಎತ್ತರ ಮಾಡಿ ಯಾರಿಗೂ ಅನುಮಾನ ಬಾರದಂದೆ ಸಾಗಾಣಿಕೆ ಮಾಡುತ್ತಿದ್ದರು.