ಮಂಗಳೂರು, ಜು28: ಮಂಗಳೂರು ಮಹಿಳಾ ರನ್ ತಂಡ ವಿಭಿನ್ನ ಪ್ರಯತ್ನಕ್ಕೆ ಕೈ ಹಾಕಿದ್ದು, ನಗರದಲ್ಲಿ ಆಗಸ್ಟ್ 12 ರಂದು ಸೀರೆ ತೊಟ್ಟ ಮಹಿಳೆಯರಿಗಾಗಿ ಓಟ ಅಥವಾ ನಡಿಗೆ ಸ್ಪರ್ಧೆಯನ್ನು ಆಯೋಜಿಸಿದೆ.
ಸೀರೆಯುಟ್ಟು ಮನೆ ಕೆಲಸದಲ್ಲೇ ತಲ್ಲೀನರಾಗಿರುವ ಮಹಿಳೆಯರಲ್ಲಿ ಫಿಟ್ ನೆಸ್ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ಸೀರೆ ತೊಟ್ಟ ಮಹಿಳೆಯರ ಓಟ ಅಥವಾ ನಡಿಗೆ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿದೆ. ಮಂಗಳೂರು ಮಹಿಳಾ ರನ್ ತಂಡ ನಗರದಲ್ಲಿ ಮೊದಲ ಬಾರಿಗೆ ಈ ವಿಭಿನ್ನ ಪ್ರಯತ್ನಕ್ಕೆ ಮುಂದಾಗಿದ್ದು, ಈ ಹಿನ್ನೆಲೆಯಲ್ಲಿ ಆಗಸ್ಟ್ 12 ರಂದು ಮಂಗಳೂರಿನಲ್ಲಿ ಸೀರೆಯುಟ್ಟ ನಾರಿಯರಿಗಾಗಿ ಓಟ - ನಡಿಗೆ ಆಯೋಜಿಸಲಾಗಿದೆ. ಇದರಲ್ಲಿ 1000ಕ್ಕೂ ಅಧಿಕ ಮಹಿಳೆಯರು ಪಾಲ್ಗೊಳ್ಳುವ ನಿರೀಕ್ಷೆ ಇದೆ.
ನಗರದ ಮಹತ್ಮಾಗಾಂಧಿ ಉದ್ಯಾನವನದ ಸಮೀಪದ ಮಣ್ಣಗುಡ್ಡೆ ರಸ್ತೆಯಲ್ಲಿ ಮಹಿಳೆಯರಿಗಾಗಿಯೇ ಈ ಕಾರ್ಯಕ್ರಮ ನಡೆಯಲಿದೆ. ಮಹಿಳೆಯರ ಸೀರೆ ನಡೆ ಮತ್ತು ಸೀರೆ ಓಟಗಳಿಗೆ 2 ಕಿಲೋ ಮೀಟರ್ ದೂರ ನಿಗದಿ ಮಾಡಲಾಗಿದೆ. ಸೀರೆ ನಡೆ ಮತ್ತು ಓಟದಲ್ಲಿ ಪಾಲ್ಗೊಂಡು ಉತ್ತಮ ಪ್ರತಿಭೆ ತೋರಿಸಿದವರಿಗೆ ಆಕರ್ಷಕ ಬಹುಮಾನ ನೀಡಲು ತೀರ್ಮಾನಿಸಲಾಗಿದೆ. ಪಾಲ್ಗೊಂಡ ಎಲ್ಲಾ ಸ್ಪರ್ಧಾಳುಗಳಿಗೆ ಪದಕ ಹಾಗು ಪ್ರಮಾಣ ಪತ್ರ ನೀಡಲು ಮಂಗಳೂರು ಮಹಿಳಾ ರನ್ ತಂಡದ ಆಯೋಜಕರು ತೀರ್ಮಾನಿಸಿದ್ದಾರೆ.