ಕೊಯಿಮತ್ತೂರು, ಜು28: ಯೂಟ್ಯೂಬ್ ವಿಡಿಯೋ ನೋಡಿ ಪತಿ ಪತ್ನಿಗೆ ಹೆರಿಗೆ ಮಾಡಿಸಲು ಮುಂದಾಗಿ ಆಕೆ ಸಾವನ್ನಪ್ಪಿದ್ದ ಹೃದಯವಿದ್ರಾವಕ ಘಟನೆ ಕೊಯಿಮತ್ತೂರಿನಲ್ಲಿ ನಡೆದಿದೆ.
ಶಾಸಗಿ ಶಾಲೆಯ ಶಿಕ್ಷಕಿಯಾಗಿದ್ದ ಕೃತಿಕಾ ಮೃತ ದುರ್ದೈವಿಯಾಗಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳೆಯ ಪತಿಯನ್ನು ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆ. ಹೆರಿಗೆ ವೇಳೆ ಕೃತಿಕಾ ಅವರು ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ನಂತರ ಪ್ರಜ್ಞೆ ಕಳೆದುಕೊಂಡಿದ್ದಾರೆ. ಸೂಕ್ತ ಸಮಯಕ್ಕೆ ಮಾಸು ಹೊರಬರದ ಕಾರಣ, ತೀವ್ರ ರಕ್ತಸ್ರಾವವಾಗಿದೆ. ಕೂಡಲೇ ಕೃತಿಕಾ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಷ್ಟರಲ್ಲಾಗಲೇ ಕೃತಿಕಾ ಅವರು ಸಾವನ್ನಪ್ಪಿದ್ದಾರೆ.
ಮೊದಲ ಮಗುವಿಗೆ ಆಸ್ಪತ್ರೆಯಲ್ಲಿಯೇ ಜನ್ಮ ನೀಡಿದ್ದ ಮಹಿಳೆ, ನಂತರ ನೈಸರ್ಗಿದ ವೈದ್ಯ ಪದ್ಧತಿ ಅನುಸರಿಸಲು ಇಚ್ಛಿಸಿದ್ದಾರೆ. ಇದರಂತೆ ಎರಡನೇ ಮಗುವನ್ನು ಮನೆಯಲ್ಲಿಯೇ ಹೆರಲು ನಿರ್ಧರಿಸಿ, ಇದಕ್ಕೆ ಈಕೆಯ ಪತಿ ಜೆ. ಕಾರ್ತಿಕೇಯನ್ ಕೂಡ ಬೆಂಬಲ ನೀಡಿದ್ದಾರೆ ಎಂದು ತಿಳಿದುಬಂದಿದೆ.
ಯೂಟ್ಯೂಬ್ ನೋಡಿ ಮನೆಯಲ್ಲಿಯೇ ಹೆರಿಗೆ ಮಾಡಿಸಲು ಮುಂದಾಗಿದ್ದವರಿಗೆ ವೈದ್ಯಕೀಯ ಜ್ಞಾನವಿರಲಿಲ್ಲ ಎಂದು ಕೃತಿಕಾ ತಂದೆ ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣ ಸಂಬಂಧ ಕೃತಿಕಾ ಪತಿ ಕಾರ್ತಿಕೇಯನ್ ವಿರುದ್ಧ ಐಪಿಸಿ ಸೆಕ್ಷನ್ 304 (ಎ) ನಿರ್ಲಕ್ಷ್ಯದ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಮನೆಯಲ್ಲಿಯೇ ಹೆರಿಗೆ ಮಾಡಿಸಿಕೊಳ್ಳುವಂತೆ ಪತ್ನಿ ಮೇಲೆ ನಾನು ಒತ್ತಡ ಹೇರಿರಲಿಲ್ಲ. ಹೆರಿಗೆ ವಿಚಾರ ಆಕೆಯ ಆಯ್ಕೆಗೆ ಬಿಟ್ಟಿದ್ದೆ ಎಂದು ಕಾರ್ತಿಕೇಯನ್ ಅವರು ಪೊಲೀಸರಿಗೆ ತಿಳಿಸಿದ್ದಾರೆ.