ಕಡಬ, ಜು 29: ಅಲಂಕಾರು ಗ್ರಾಮದಲ್ಲಿ ನೆಟ್ಟಿರುವ ಗೇರು ಸಸಿಗಳು ರಾತ್ರಿ ವೇಳೆ ಕಳ್ಳತನವಾಗುತ್ತಿದ್ದು, ಕಾನತ್ತೂರು ದೈವಕೆ ಹರಕೆ ಹೇಳುವುದಾಗಿ ಕರ್ನಾಟಕ ಗೇರು ಅಭಿವೃದ್ದಿ ನಿಗಮ ಎಚ್ಚರಿಕೆ ಫಲಕಗಳನ್ನು ಅಳವಡಿಸಿದೆ. ನಿಗಮದ ಭೂಮಿಯಲ್ಲಿ ನೂತನವಾಗಿ ನಾಟಿ ಮಾಡಿರುವ ಗೇರು ಸಸಿಗಳನ್ನು ಕಳವು ಮಾಡುತ್ತಿರುವವರನ್ನು ಪತ್ತೆಹಚ್ಚಲು ಸಾಧ್ಯವಾಗದೆ ನಿಗಮದ ಅಧಿಕಾರಿಗಳು ಕಾನತ್ತೂರು ದೈವದ ಮೊರೆ ಹೋಗಿದ್ದಾರೆ.
ಗೇರು ಅಭಿವೃದ್ದಿ ನಿಗಮ ಅಲಂಕಾರು ಗ್ರಾಮದಲ್ಲಿ ತನ್ನ ಅಧೀನದ 210 ಎಕರೆ ಜಾಗದಲ್ಲಿ 2000 ಗಿಡಗಳನ್ನು ನೆಡುವ ಯೋಜನೆ ಹಾಕಿಕೊಂಡಿತ್ತು. ಮಳೆಗಾಲದ ಆರಂಭದಲ್ಲಿ ಗುಂಡಿ ನಿರ್ಮಿಸಿ ಗಿಡ ನೆಡುವ ಕಾರ್ಯವನ್ನು ಒಂದು ವಾರದ ಹಿಂದೆ ಮಾಡಿ ಮುಗಿಸಿಸಿತ್ತು. ಆದರೆ ಗಿಡ ನೆಟ್ಟ ಮರುದಿನದಿಂದಲೇ ಗಿಡಗಳು ನಾಪತ್ತೆಯಾಗಲು ಪ್ರಾರಂಭವಾಗಿತ್ತು. ಇದುವರೆಗೆ ನೂರಕ್ಕೂ ಅಧಿಕ ಗಿಡಗಳು ಕಾಣೆಯಾಗಿದೆ. ಜತೆಗೆ 100 ಕ್ಕೂ ಅಧಿಕ ಗಿಡಗಳನ್ನು ಕಿತ್ತು ನಾಶಪಡಿಸಲಾಗಿದೆ. ಕಿಡಿಗೇಡಿಗಳ ಪತ್ತೆಗಾಗಿ ಸಿಬ್ಬಂದಿ ಹಲವು ದಿನಗಳಿಂದ ಕಾವಲು ಕಾಯುತ್ತಿದ್ದಾರೆ. ರಾತ್ರಿ ವೇಳೆಯಲ್ಲಿ ಗಿಡ ಕಳವು ನಡೆಯುತ್ತಿರುವುದರಿಂದ ಸಮಸ್ಯೆ ಪರಿಹಾರ ಕಷ್ಟವಾಗಿದ್ದು, ಇದೀಗ ನಿಗಮವು ದೈವದ ಮೊರೆ ಹೋಗಿದೆ.