ಬೆಂಗಳೂರು, ಜು 29 : ರೈತರ ಸಾಲ ಮನ್ನಾ ಯೋಜನೆಯ ಸಂಪೂರ್ಣ ಲಾಭ ಫಲಾನುಭವಿ ರೈತರಿಗೆ ಸಿಗಬೇಕು ಇದರ ಹೊರತಾಗಿ ಮಧ್ಯವರ್ತಿಗಳ ಪಾಲಾಗಬಾರದೆಂಬ ಕಾರಣಕ್ಕೆ ಸಾಲ ಮನ್ನಾದ ಲಾಭ ಪಡೆಯುವ ರೈತರ ಹೆಸರುಗಳನ್ನು ಆಯಾ ಸಹಕಾರ ಬ್ಯಾಂಕ್ ಅಥವಾ ಸೊಸೈಟಿಗಳ ನೋಟಿಸ್ ಬೋರ್ಡ್ಗಳಲ್ಲಿ ಪ್ರಕಟಿಸಲು ರಾಜ್ಯಸರ್ಕಾರ ನಿರ್ಧರಿಸಿದೆ.
ಈ ಬಗ್ಗೆ ವಿಕಾಸಸೌಧದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಹಕಾರ ಸಚಿವ ಬಂಡೆಪ್ಪ ಕಾಶೆಂಪೂರ ಹಿಂದೆ ರೈತರ ಸಾಲ ಮನ್ನಾ ಮಾಡಿದಾಗ ಹಲವೆಡೆ ಸೊಸೈಟಿ ಹಾಗೂ ಸಹಕಾರ ಬ್ಯಾಂಕ್ನ ಕಾರ್ಯದರ್ಶಿಗಳು ರೈತರ ಹೆಸರಿನಲ್ಲಿ ದುರುಪಯೋಗಪಡಿಸಿಕೊಂಡಿರುವ ಉದಾಹರಣೆಗಳಿವೆ.ಹೀಗಾಗಿ ಮನ್ನಾ ಆಗುವ ಸಾಲದ ಮೊತ್ತವನ್ನು ರೈತರ ಖಾತೆಗಳಿಗೆ ನೇರವಾಗಿ ಜಮಾ ಮಾಡುವುದರೊಂದಿಗೆ ಯಾವ ರೈತರಿಗೆ ಎಷ್ಟು ಸಾಲ ಮನ್ನಾ ಆಗಿದೆ ಮತ್ತು ಯಾವತ್ತಿನಿಂದ ಅದು ಜಾರಿಯಾಗುತ್ತದೆ ಎಂಬ ಅಂಶಗಳು ರೈತರ ಹೆಸರಿನ ಸಹಿತ ನೋಟಿಸ್ ಬೋರ್ಡ್ ಗಳಲ್ಲಿ ಹಾಕಲಾಗುವುದು ಎಂದು ಸಹಕಾರ ಸಚಿವ ಬಂಡೆಪ್ಪ ಕಾಶೆಂಪೂರ ತಿಳಿಸಿದ್ದಾರೆ.ಇದರೊಂದಿಗೆ ಸಾಲ ಮನ್ನಾ ಜತೆಗೆ ರೈತರಿಗೆ ಋಣಮುಕ್ತ ಪತ್ರವನ್ನೂ ನೀಡಲಾಗುತ್ತದೆ ಎಂದರು.