ಉಡುಪಿ, ಜು 29: ಮಣಿಪಾಲ- ಪೆರಂಪಳ್ಳಿ ರಸ್ತೆಯ ಕಟ್ಟಡವೊಂದರ ಸೆವೆನ್ತ್ ಹೆವೆನ್ ಹೊಟೇಲಿನ ಮೊದಲ ಮಹಡಿಯ ರಿಕ್ರೀಯೆಷನ್ ಕ್ಲಬ್ನ ಮಾಲಕ ಗುರುಪ್ರಸಾದ್ ಭಟ್ (44) ದುಷ್ಕರ್ಮಿಗಳ ತಂಡ ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ಇಂದು ನಡೆದಿದ್ದು, ಆರೋಪಿಗಳನ್ನು ಬಂಧಿಸಿದ್ದಾರೆ.
ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿ ಮೂವರನ್ನು ಕಂಡ್ಲೂರು ಚೆಕ್ಪೋಸ್ಟ್ ನಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತರನ್ನು ಕೊಡಂಕೂರು ನ್ಯೂ ಕಾಲನಿಯ ಪ್ರದೀಪ್ ಪೂಜಾರಿ(36), ಕಲ್ಯಾಣಪುರದ ಸುಜಿತ್ ಪಿಂಟೋ(35) ಹಾಗೂ ಕುಂಜಿಬೆಟ್ಟು ಕಕ್ಕುಂಜೆಯ ರಾಜೇಶ್ ಪೂಜಾರಿ(30) ಎಂದು ಗುರುತಿಸಲಾಗಿದೆ. ಇನ್ನೋರ್ವ ಆರೋಪಿ ತಲೆಮರೆಸಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಒಮ್ನಿ ಕಾರಿನಲ್ಲಿ ಬಂದ ನಾಲ್ವರು ಕ್ಲಬ್ಗೆ ನುಗ್ಗಿ ಗುರುಪ್ರಸಾದ್ ಭಟ್ಗೆ ಹಲ್ಲೆ ನಡೆಸಿ ಕುತ್ತಿಗೆಯ ಹಿಂಭಾಗಕ್ಕೆ ಚೂರಿಯಿಂದ ಇರಿದು ಅದೇ ಕಾರಿನಲ್ಲಿ ಪರಾರಿಯಾಗಿದ್ದರು. ಗುರುಪ್ರಸಾದ್ ಹಲವು ಮಂದಿಯ ಜೊತೆ ಹಣಕಾಸು ವ್ಯವಹಾರ ಹೊಂದಿದ್ದು, ಇದೇ ಕಾರಣಕ್ಕೆ ದುಷ್ಕರ್ಮಿಗಳು ಅವರನ್ನು ಕೊಲೆ ಮಾಡಿದ್ದಾರೆಂಬುದು ತಿಳಿದುಬಂದಿದೆ. ಬಹಳಷ್ಟು ದುಂದು ವೆಚ್ಚ ಮಾಡುತ್ತಿದ್ದ ಗುರುಪ್ರಸಾದ್, ಹಲವು ಮಂದಿಯಿಂದ ಹಣ ಪಡೆದು ಹಿಂತಿರುಗಿಸದೆ ದ್ವೇಷ ಕಟ್ಟಿಕೊಂಡಿದ್ದರು ಎಂದು ಹೇಳಲಾಗಿದೆ.