ಮಂಗಳೂರು, ಜು 30: ಕಳೆದ ಎಂಟು ವರ್ಷಗಳಿಂದ ನಿಧಾನಗತಿಯಲ್ಲಿ ನಡೆಯುತ್ತಿರುವ ಪಂಪ್ ವೆಲ್ ಪ್ಲೈಓವರ್ ರಸ್ತೆ ಕಾಮಗಾರಿ ವಿರೋಧಿಸಿ ಮಂಗಳೂರು ಉತ್ತರ ಹಾಗೂ ದಕ್ಷಿಣ ಬ್ಲಾಕ್ ಕಾಂಗ್ರೆಸ್ ವತಿಯಿಂದ ಆಗಸ್ಟ್ 1 ರಂದು ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಮಾಜಿ ಶಾಸಕ ಜೆ.ಆರ್.ಲೋಬೊ ಹೇಳಿದ್ದಾರೆ. ಅವರು ಜು. 30 ರ ಸೋಮವಾರ ನಗರದಲ್ಲಿ ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿ, ಪ್ಲೈ ಓವರ್ ಕಾಮಗಾರಿಗಳು ದೇಶದಲ್ಲಿ ಹೆಚ್ಚಾಗಿ ಒಂದೂವರೆ ವರ್ಷದೊಳಗೆ ಮುಕ್ತಾಯವಾಗುತ್ತದೆ. ಆದರೆ ಪಂಪ್ವೆಲ್ನ ಕಾಮಗಾರಿ ಎಂಟು ವರ್ಷ ಕಳೆದರೂ ಇನ್ನೂ ಪೂರ್ಣಗೊಂಡಿಲ್ಲ. ಜನಸಾಮಾನ್ಯರು ಇದರಿಂದ ತೊಂದರೆಗೊಳಗಾಗುತ್ತಿದ್ದು, ಇದಕ್ಕೆ ಕೇಂದ್ರ ಸರಕಾರವನ್ನು ಪ್ರತಿನಿಧಿಸುವ ಸಂಸದರೇ ನೇರ ಕಾರಣ ಎಂದು ಆರೋಪಿಸಿದರು.
ಬಳಿಕ ಮುಂದುವರಿಸಿ ಮಾತನಾಡಿದ ಅವರು ಪಂಪ್ವೆಲ್ ಪ್ಲೈ ಓವರ್ ಕಾಮಗಾರಿ ವಿಳಂಬವಾಗಲು ನಾನು ಕಾರಣ ಎಂದು ಆರೋಪಿಸಲಾಗುತ್ತಿದೆ. ಆದರೆ ಇದೊಂದು ಆಧಾರ ರಹಿತ ಆರೋಪವಾಗಿದ್ದು, ಶಾಸಕನಾಗಿದ್ದಾಗ ನಾನು ಯೋಜನೆಯ ವಿನ್ಯಾಸವನ್ನಾಗಲಿ ಬದಲಾಯಿಸಲು ಹೇಳಿಲ್ಲ ಅಥವಾ ಕಾಮಗಾರಿಗೆ ಸಂಬಂಧಪಟ್ಟಂತೆ ಯಾವುದೇ ವಿಚಾರದಲ್ಲಿ ಮದ್ಯಪ್ರವೇಶವನ್ನು ಮಾಡಿಲ್ಲ.ಒಂದು ವೇಳೆ ಗುತ್ತಿಗೆ ವಹಿಸಿಕೊಟ್ಟ ಗುತ್ತಿಗೆ ದಾರರು ಕಾರ್ಯನಿರ್ವಹಿಸದೆ ಇದ್ದರೆ ಅವರ ವಿರುದ್ಧ ಕ್ರಮಕೈಗೊಳ್ಳವ ಅವಕಾಶ ಇತ್ತು, ಅಥವಾ ಬ್ಲಾಕ್ ಲಿಸ್ಟ್ ಗೂ ಸೇರಿಸಬಹುದಾಗಿತ್ತು. ಆದರೆ ಇದೆಲ್ಲವನ್ನು ಸುಖಾಸುಮ್ಮನೆ ನನ್ನ ಮೇಲೆ ಆರೋಪ ಹೊರಿಸುವ ಸಂಸದ ನಳಿನ್ ಕುಮಾರ್ ಕಟೀಲ್ ಗೆ ಮಾಹಿತಿಯ ಕೊರತೆ ಇದೆ ಎಂದು ತಿಳಿಸಿದರು.
ರಾಷ್ಟೀಯ ಹೆದ್ದಾರಿಯ ಅಧಿಕಾರಿಗಳು ಗುತ್ತಿಗೆದಾರರ ಹಾಗೂ ಕಾಮಗಾರಿಯನ್ನು ನಿರ್ವಹಿಸಬೇಕಾದ ಕೇಂದ್ರ ಸರಕಾರದ ಬೇಜವಾಬ್ದಾರಿಯಿಂದ ಜನಸಾಮಾನ್ಯರು ರೋಸಿಹೋಗಿದ್ದಾರೆ. ಮುಂಬರುವ ಲೋಕಸಭೆ ಚುನಾವಣೆಗಾಗಿ ಗಿಮಿಕ್ ಮಾಡುವುದು ಬಿಟ್ಟರೆ ಕೇಂದ್ರ ಸರ್ಕಾರ , ರಾಜ್ಯದ ಮನವಿಯನ್ನು ಕ್ಯಾರೇ ಅನ್ನುತ್ತಿಲ್ಲ. ಈ ಹಿನ್ನೆಲೆಯಲ್ಲಿ ಕೇಂದ್ರ ಸರಕಾರದ ಧೋರಣೆಯ ವಿರುದ್ಧ ಪ್ರತಿಭಟನೆ ಅನಿವಾರ್ಯವಾಗಿದೆ ಎಂದು ಜೆ.ಆರ್.ಲೋಬೊ ಹೇಳಿದರು.
ಇದಲ್ಲದೆ ಹಲವು ರಾಷ್ಟ್ರೀಯ ಹೆದ್ದಾರಿಗಳು ಸಮಸ್ಯೆಗಳ ಅಗಾರವಾಗಿದ್ದು, ಹೀಗಾಗಿ ಕೇಂದ್ರ ಸರಕಾರದ ನಿರ್ಲಕ್ಷ ಧೋರಣೆಯ ವಿರುದ್ಧ ಪ್ರತಿಭಟನೆ ಅನಿವಾರ್ಯವಾಗಿದೆ ಎಂದು ಹೇಳಿದರು .
ಉಳಿದಂತೆ ಪತ್ರಿಕಾಗೋಷ್ಟಿಯಲ್ಲಿ ದಕ್ಷಿಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಬ್ದುಲ್ ಸಲಿಂ, ಕಾಂಗ್ರೆಸ್ ಮುಖಂಡರಾದ ಕಳ್ಳಿಗೆ ತಾರಾನಾಥ ಶೆಟ್ಟಿ, ಮುಂತಾದವರು ಉಪಸ್ಥಿತರಿದ್ದರು.