ಕಾಸರಗೋಡು, ಜು 30 : ಗಡಿನಾಡ ಕಾಸರಗೋಡಿನಲ್ಲಿ ಕನ್ನಡಿಗರ ಸಾಂವಿಧಾನಿಕ ಹಕ್ಕುಗಳನ್ನು ಕಸಿಯುವ ಹುನ್ನಾರ ನಡೆಯುತ್ತಿದ್ದು , ಇದೀಗ ಕನ್ನಡ ಭಾಷಾ ವಿದ್ಯಾರ್ಥಿಗಳಿಗೆ ಮಲಯಾಳ ಶಿಕ್ಷಕರನ್ನು ನೇಮಿಸುವ ಮೂಲಕ ಪ್ರಹಾರ ನೀಡಿದೆ. ಉಪ್ಪಳ ಸಮೀಪದ ಮಂಗಲ್ಪಾಡಿ ಕುಕ್ಕಾರು ಸರಕಾರಿ ಪ್ರೌಢ ಶಾಲೆಗೆ ಗಣಿತ ಪಾಠಕ್ಕೆ ಮಲಯಾಳ ಶಿಕ್ಷಕರನ್ನು ನೇಮಿಸಿದ್ದನ್ನು ಪ್ರತಿಭಟಿಸಿ ಶಾಲೆಯ ಕನ್ನಡ ವಿದ್ಯಾರ್ಥಿಗಳು ಜು.30ರ ಸೋಮವಾರ ಬೆಳಗ್ಗಿನಿಂದ ತರಗತಿ ಬಹಿಷ್ಕರಿಸಿದ್ದಾರೆ.
ಕಾಸರಗೋಡಿನ ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ ಕನ್ನಡ ಅರಿಯದ ಶಿಕ್ಷಕರನ್ನು ನೇಮಿಸಲಾಗುತ್ತಿದ್ದು, ಉಪ್ಪಳ ಸಮೀಪದ ಕುಕ್ಕಾರು ಮಂಗಲ್ಪಾಡಿ ಸರಕಾರಿ ಹೈಸ್ಕೂಲಿನ ಕನ್ನಡ ಮಾಧ್ಯಮ ಗಣಿತ ಶಿಕ್ಷಕ ತೆರವಿದ್ದ ಹುದ್ದೆಗೆ ಮಲೆಯಾಳ ಶಿಕ್ಷಕರನ್ನು ನೇಮಕಗೊಳಿಸಿದೆ. ಮಂಗಲ್ಪಾಡಿ ಸರಕಾರಿ ಹೈಸ್ಕೂಲಿನಲ್ಲಿ ಎಂಟು, ಒಂಬತ್ತು ಹಾಗೂ ಹತ್ತನೇ ತರಗತಿಯ ಕನ್ನಡ ಮಾಧ್ಯಮಗಳಲ್ಲಿ ಪ್ರತಿ ತರಗತಿಗಳಲ್ಲೂ ಎರಡೆರಡು ಡಿವಿಜನ್ ಗಳಿದ್ದು, 400ಕ್ಕೂ ಮಿಕ್ಕಿದ ವಿದ್ಯಾರ್ಥಿಗಳಿದ್ದಾರೆ. ಕನ್ನಡ ಮಾಧ್ಯಮ ತರಗತಿಗಳಿಗೆ ಕನ್ನಡ ಬಲ್ಲ ಶಿಕ್ಷಕರನ್ನೇ ನೇಮಿಸಬೇಕೆಂಬ ಸಾಂವಿಧಾನಿಕ ಹಕ್ಕು ಮತ್ತು ಆದೇಶಗಳನ್ನು ಗಾಳಿಗೆ ತೂರಿ ಮಲೆಯಾಳ ಮಾತ್ರ ಗೊತ್ತಿರುವ ಶಿಕ್ಷಕರೋರ್ವರನ್ನು ನೇಮಕಗೊಳಿಸಿ ರುವುದು ವಿದ್ಯಾರ್ಥಿಗಳ ಭವಿಷ್ಯವನ್ನು ಘಾಸಿಗೊಳಿಸುವ ಭೀತಿ ಎದುರಾಗಿದೆ.
ವಿದ್ಯಾರ್ಥಿಗಳು ಅತಂತ್ರ :
ಮಂಗಲ್ಪಾಡಿ ಸರಕಾರಿ ಶಾಲೆಯು ಶತಮಾನಗಳ ಹೊಸ್ತಿಲಲ್ಲಿರುವ ವಿದ್ಯಾಸಂಸ್ಥೆಯಾಗಿದ್ದು, ಬಡ-ಮಧ್ಯಮ ವರ್ಗದ ವಿದ್ಯಾರ್ಜನೆಗೆ ಪೂರಕವಾಗಿ ಕಾರ್ಯನಿರ್ವಹಿಸುತ್ತಿದೆ. ಇಲ್ಲಿಯ ಶಾಲೆಯಲ್ಲಿ ಮಲೆಯಾಳ ಹಾಗೂ ಆಂಗ್ಲ ಮಾಧ್ಯಮಗಳಲ್ಲೂ ಶಿಕ್ಷಣ ಸೌಲಭ್ಯವಿದ್ದು, ಹೆಚ್ಚು ಮಂದಿ ಕನ್ನಡ ಮಾಧ್ಯಮದಲ್ಲೇ ಕಲಿಯುತ್ತಿರುವುದು ವಿಶೇಷ. ರಾಷ್ಟ್ರೀಯ ಹೆದ್ದಾರಿಗೆ ತಾಗಿಕೊಂಡಿರುವ ಕುಕ್ಕಾರು ಶಾಲೆಯೆಂದೇ ಪ್ರಸಿದ್ಧವಾಗಿರುವ ಈ ಪರಿಸರದ ಐಲ, ನಯಾಬಝಾರ್, ಮಲ್ಲಂಗೈ, ಬಂದ್ಯೋಡು, ಅಂಬಾರು ಪರಿಸರದ ಸಾವಿರಾರು ವಿದ್ಯಾರ್ಥಿಗಳಿಗೆ ಒಂದನೇ ತರಗತಿಯಿಂದಲೇ ಕಲಿಕಾವಕಾಶವಿರುವ ಶಾಲೆಯಾಗಿ ಗುರುತಿಸಿಕೊಂಡಿದೆ. ಮಲೆಯಾಳ ಶಿಕ್ಷಕರನ್ನು ನೇಮಕಗೊಳಿಸಿರುವುದರಿಂದ ಹೆತ್ತವರು ಆತಂಕಿತರಾಗಿದ್ದಾರೆ.
ಜು. 31 ರ ಮಂಗಳವಾರ ಸಂಜೆಯೊಳಗೆ ಶಿಕ್ಷಣ ಇಲಾಖೆ ಕ್ರಮ ತೆಗೆದುಕೊಳ್ಳಬೇಕು. ಇಲ್ಲದಿದ್ದಲ್ಲಿ ಆಗಸ್ಟ್ 1 ರಿಂದ ತೀವ್ರ ಸ್ವರೂಪದ ಹೋರಾಟ ನಡೆಸಲಾಗುವುದು ಎಂದು ವಿದ್ಯಾರ್ಥಿಗಳು ಮತ್ತು ಶಾಲಾ ರಕ್ಷಕ - ಶಿಕ್ಷಕ ಸಂಘ ಮುನ್ನೆಚ್ಚರಿಕೆ ನೀಡಿದೆ.ಕನ್ನಡ ಮಾಧ್ಯಮ ಶಾಲೆಗಳಲ್ಲಿ ಕನ್ನಡ ಅರಿಯದ ಮಲಯಾಳ ಶಿಕ್ಷಕರನ್ನು ನೇಮಿಸುವ ವ್ಯವಸ್ಥಿತ ಹುನ್ನಾರ ನಡೆಯುತ್ತಲೇ ಇದ್ದು , ಕನ್ನಡ ವಿದ್ಯಾರ್ಥಿಗಳ ಭವಿಷ್ಯ ತೂಗುಯ್ಯಾಲೆಯಲ್ಲಿದೆ. ವಿದ್ಯಾರ್ಥಿಗಳು ಅನ್ಯ ಮಾರ್ಗವಿಲ್ಲದೆ ತರಗತಿ ಬಹಿಷ್ಕಾರ ಹಾಗೂ ಪ್ರತಿಭಟನೆಯ ಹಾದಿ ಇಳಿಯಬೇಕಾಗಿದೆ