ಮಂಗಳೂರು, ಜು 31: ರಸ್ತೆ ಪಕ್ಕದಲ್ಲಿ ನಿಲ್ಲಿಸಿದ್ದ ವಾಹನಗಳಿಗೆ ಹೊಂಡ ಸಿಟಿ ಕಾರೊಂದು ಡಿಕ್ಕಿ ಹೊಡೆದ ಘಟನೆ ಮಂಗಳೂರಿನ ಬೊಂದೇಲ್ ನಲ್ಲಿ ಜು. 31ರ ಮಂಗಳವಾರ ನಡೆದಿದೆ. ವಿಮಾನ ನಿಲ್ದಾಣ ರಸ್ತೆಯಲ್ಲಿ ಈ ಘಟನೆ ನಡೆದಿದ್ದು ಅಪಘಾತದ ಬಳಿಕ ಕಾರು ನಿಲ್ಲಿಸದೆ ಪರಾರಿಯಾಗಿದ್ದಾನೆ.
ಆದರೆ ಅಪಘಾತದ ಬಳಿಕ ಸ್ಥಳದಲ್ಲಿಯೇ ಕಾರಿನ ಎದುರು ಭಾಗದ ನಂಬರ್ ಪ್ಲೇಟ್ ಬಿದ್ದಿದ್ದ ಕಾರಣ ಪೊಲೀಸರು ಕಾರನ್ನು ಪತ್ತೆ ಹಚ್ಚಿದ್ದು, ಕೊಟ್ಟಾರ ಚೌಕಿ ಬಳಿಯಿಂದ ಚಾಲಕನನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಕಾರು ಚಲಾಯಿಸುತ್ತಿದ್ದ 23 ವರ್ಷದ ಅಮೃತ್ ಬೆಂಗಳೂರಿನಲ್ಲಿ ವಿದ್ಯಾರ್ಥಿಯಾಗಿದ್ದು, ಮೂಲತಃ ಉಪ್ಪಿನಂಗಡಿಯವನಾಗಿದ್ದಾನೆ. ಕಾವೂರಿನಲ್ಲಿರುವ ತನ್ನ ಮನೆಗೆ ಭೇಟಿ ನೀಡಿ ತೆರಳುತ್ತಿದ್ದಾಗ ಬೊಂದೇಲ್ ನಲ್ಲಿ ನಿಯಂತ್ರಣ ತಪ್ಪಿ ನಿಲ್ಲಿಸಿದ ವಾಹನಗಳಿಗೆ ಡಿಕ್ಕಿ ಹೊಡೆದಿದ್ದಾನೆ. ಸ್ಥಳೀಯರ ಭಯದಿಂದ ಅಪಘಾತದ ಸ್ಥಳದಿಂದ ಪರಾರಿಯಾಗಿದ್ದು, ಕೊಟ್ಟಾರ ಚೌಕಿ ಹೊಂಡ ಶೋರೂಂ ಬಳಿ ವಾಹನ ನಿಲ್ಲಿಸಿದ್ದ ಆತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇನ್ನು ಘಟನೆಯಲ್ಲಿ ರಸ್ತೆ ಪಕ್ಕದಲ್ಲಿ ನಿಲ್ಲಿಸಲಾಗಿದ್ದ ನಾಲ್ಕಾರು ಬೈಕ್ ಗಳಿಗೆ ಹಾನಿಯಾಗಿದೆ. ಸ್ಥಳಕ್ಕೆ ಮಂಗಳೂರು ದಕ್ಷಿಣ ಸಂಚಾರಿ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.