ಕುಂದಾಪುರ, ಜು 31: ಭಾನುವಾರ ನಡು ಮಧ್ಯಾಹ್ನ ಚೂರಿ ಇರಿತದಿಂದ ಕೊಲೆಯಾದ ಗುರುಪ್ರಸಾದ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮಿಂಚಿನ ಕಾರ್ಯಾಚರಣೆ ನಡೆಸಿದ್ದ ಪೊಲೀಸರು ಬಂಧಿತ ಆರೋಪಿಗಳನ್ನು ಮಹಜರು ನಡೆಸಲು ಮಂಗಳವಾರ ಕುಂದಾಪುರದ ಕಂಡ್ಲೂರಿಗೆ ಕರೆದೊಯ್ದು ವಿಚಾರಣೆ ನಡೆಸಿದ್ದಾರೆ.
ಮಣಿಪಾಲದ ರಿಕ್ರಿಯೇಶನ್ ಕ್ಲಬ್ನಲ್ಲಿ ಮಾಲಕ ಗುರುಪ್ರಸಾದ್ನನ್ನು ಚೂರಿಯಿಂದ ಇರಿದ ಬಳಿಕ ಆರೋಪಿಗಳು ಪ್ರದೀಪ್ ಪೂಜಾರಿಯ ಮಾರುತಿ ಓಮ್ನಿ ಕಾರಿನಲ್ಲಿ ಪರಾರಿಯಾಗಿದ್ದರು. ಖಚಿತ ಮಾಹಿತಿ ಪಡೆದ ಪೊಲೀಸರು ಆರೋಪಿಗಳಲ್ಲಿ ಮೂವರನ್ನು ಕಂಡ್ಲೂರು ಸೇತುವೆ ಸಮೀಪ ಬಂಧಿಸಿದ್ದರು. ತೀವ್ರ ವಿಚಾರಣೆಗೊಳಪಡಿಸಿದ ಬಳಿಕ ಆರೋಪಿಗಳು ಕೃತ್ಯಕ್ಕೆ ಬಳಸಿದ ಚೂರಿ ಹಾಗೂ ಮಾರಕಾಯುಧಗಳನ್ನು ಕಂಡ್ಲೂರು ಸೇತುವೆಯ ಕೆಳಗೆ ಎಸೆದಿರುವುದಾಗಿ ಬಾಯ್ಬಿಟ್ಟಿರುವುದಾಗಿ ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ಮಣಿಪಾಲ ವೃತ್ತ ನಿರೀಕ್ಷಕ ಸುದರ್ಶನ್ ಅವರ ತಂಡ ಕುಂದಾಪುರ ಗ್ರಾಮಾಂತರ ಠಾಣಾ ಪೊಲೀಸ್ ಸಹಕಾರದೊಂದಿಗೆ ಆರೋಪಿಗಳನ್ನು ಕಂಡ್ಲೂರು ಸೇತುವೆ ಬಳಿ ಕರೆದೊಯ್ದು ಮಹಜರು ನಡೆಸಿದ್ದಾರೆ.
ಹಪ್ತಾ ಚುಕ್ತಾ : ಕೊಲೆಯಾದ ಗುರುಪ್ರಸಾದ್ ಹಾಗೂ ಹತ್ಯೆ ನಡೆಸಿದ್ದ ಪ್ರದೀಪ್ ಪೂಜಾರಿ ಹಾಗೂ ಆತನ ಸಹಚರರು ಸ್ನೇಹಿತರಾಗಿದ್ದು, ಆರೋಪಿಗಳು ಹಪ್ತಾ ವಸೂಲಿ ಹಾಗೂ ಗಾಂಜಾ ಮಾರಾಟ ಕೃತ್ಯದಲ್ಲಿ ತೊಡಗಿದ್ದರೆನ್ನಲಾಗಿದೆ. ಗುರುಪ್ರಸಾದ್ ರಿಕ್ರಿಯೇಷನ್ ಕ್ಲಬ್ ನಡೆಸುತ್ತಿದ್ದು, ಅದಕ್ಕಾಗಿ ವಸೂಲಾಗಿದ್ದ ಹಪ್ತಾ ಕೇಳುತ್ತಿದ್ದ ಎನ್ನಲಾಗಿದ್ದು, ಅದನ್ನು ಕೊಡಲೊಪ್ಪದಿದ್ದಾಗ ಇಬ್ಬರೊಳಗೆ ಗಲಾಟೆಯಾಗಿತ್ತು ಎನ್ನಲಾಗಿದೆ. ಹೀಗೆ ಮುಂದುವರಿದಿದ್ದ ಗಲಾಟೆ ಬೂದಿ ಮುಚ್ಚಿದ ಕೆಂಡದಂತಿತ್ತು ಎನ್ನಲಾಗಿದ್ದು, ಪ್ರದೀಪ್ ಪೂಜಾರಿ ಹಾಗೂ ಸ್ನೇಹಿತರು ಗುರುಪ್ರಸಾದ್ನನ್ನು ಮುಗಿಸುವ ಸ್ಕೆಚ್ ಹಾಕಿದ್ದರು ಎಂದು ತಿಳಿದುಬಂದಿದೆ. ಗುರುಪ್ರಸಾದ್ನನ್ನು ಮುಗಿಸಿದರೆ ಉಳಿದವರು ಕಿಂಗ್ ಆಗಬಹುದು ಎಂದು ಕನಸು ಕಂಡಿದ್ದೇ ಗುರುಪ್ರಸಾದ್ ಕೊಲೆಗೆ ಕಾರಣ ಎನ್ನಲಾಗುತ್ತಿದೆ.