ಬೆಂಗಳೂರು, ಜು 31: ಉತ್ತರ ಕರ್ನಾಟಕಕ್ಕಾಗಿ ವಿಶೇಷ ಗಮನ ಹರಿಸಲು ಉತ್ತರ ಕರ್ನಾಟಕದ ಪ್ರತಿ ಜಿಲ್ಲೆಯಲ್ಲಿಯೂ ಎರಡು ದಿನ ತಂಗಿ ಅಲ್ಲಿನ ಪರಿಸ್ಥಿತಿ ಅರಿತುಕೊಳ್ಳುವೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ. ವಿಧಾನಸೌಧದಲ್ಲಿ ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ನಡೆದ ಡಿಸಿ, ಸಿಇಒಗಳ ಮೀಟಿಂಗ್ ನಲ್ಲಿ ಉತ್ತರ ಕರ್ನಾಟಕದ ಅಭಿವೃದ್ಧಿಗೆ ಏನೆಲ್ಲಾ ಕ್ರಮ ಕೈಗೊಳ್ಳಬಹುದು ಎಂಬುದನ್ನು ಪ್ರಸ್ತಾಪಿಸಿ, ನನಗೆ ಒಂದು ವರ್ಷ ಸಮಯಾವಕಾಶ ಕೊಡಿ. ಉ.ಕ.ಭಾಗದಲ್ಲಿ ಕೈಗಾರಿಕೆ ಅಭಿವೃದ್ಧಿಗೊಳಿಸುತ್ತೇನೆ ಎನ್ನುವ ಭರವಸೆ ನೀಡಿದ್ದಾರೆ.
ಇದೇ ವೇಳೆ ಬಿಜೆಪಿ ಹಾಗೂ ಯಡಿಯೂರಪ್ಪ ವಿರುದ್ದ ವಾಗ್ದಾಳಿ ನಡೆಸಿದ ಅವರು, ಕರ್ನಾಟಕ ಇಬ್ಬಾಗ ಮಾಡಲು ಬಿಜೆಪಿ ಉತ್ಸುಕವಾಗಿರುವಂತೆ ಕಾಣುತ್ತಿದೆ. ಪ್ರತ್ಯೇಕ ಉತ್ತರ ಕರ್ನಾಟಕದ ವಿಚಾರವನ್ನು ಹಿಡಿದುಕೊಂಡು, ಲೋಕಸಭೆ ಚುನಾವಣೆಗೆ ರಾಜಕೀಯ ಮಾಡಲು ಹೊರಟಿದೆ ಎಂದು ಸಿಎಂ ಕುಮಾರಸ್ವಾಮಿ ಆರೋಪಿಸಿದರು.
ಉತ್ತರ ಕರ್ನಾಟಕದ ಅಭಿವೃದ್ಧಿಗೆ ನನ್ನದೇ ಆದ ಕನಸುಗಳಿದ್ದು ಅದನ್ನ ನನಸು ಮಾಡಲು ಸಮಯಾವಕಾಶ ಬೇಕು ಎಂದ ಎಚ್ಡಿಕೆ, ಸುವರ್ಣಸೌಧ ಸದಾ ಚಟುವಟಿಯಿಂದ ಕೂಡಿರಲು ಮಾಡಬೇಕಾದ ಕೆಲಸಗಳ ಬ್ಲೂ ಪ್ರಿಂಟ್ ರೆಡಿಯಾಗಿದೆ. ಸುವರ್ಣಸೌಧಕ್ಕೆ ಯಾವ ಇಲಾಖೆಯ ಅಧಿಕಾರಿಗಳನ್ನು ಬೆಂಗಳೂರಿನಿಂದ ಕಳುಹಿಸಬೇಕು ಎಂಬ ತೀರ್ಮಾನವಾಗಿದೆ ಎಂದಿದ್ದಾರೆ.