ಬೆಳ್ತಂಗಡಿ, ಜು 31: ನೆರಿಯ ಗ್ರಾಮದ ಅಣಿಯೂರು ಎಂಬಲ್ಲಿ ಸಹೋದರಿಯರಿಬ್ಬರು ರಿಕ್ಷಾದಲ್ಲಿ ತೆರಳುತ್ತಿದ್ದ ಸಂದರ್ಭ ಪಿಕಪ್ ವಾಹನವನ್ನು ಡಿಕ್ಕಿ ಹೊಡೆಸಿ ಯುವತಿಯರ ಮೇಲೆ ದೌರ್ಜನ್ಯ ಎಸಗಲು ಯತ್ನಿಸಿದ ಆರೋಪಿ ಥಾಮಸ್ ನನ್ನು ಬಂಧಿಸಿದ ಪೊಲೀಸರು, ಆತನನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ಆರೋಪಿಗೆ 15 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಜುಲೈ 30ರ ಸೋಮವಾರದಂದು ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದ ಯುವತಿಯರನ್ನು ಟಾರ್ಗೇಟ್ ಮಾಡಿದ ಆರೋಪಿ ಯುವತಿಯರು ತೆರಳುತ್ತಿದ್ದ ಆಟೋ ರಿಕ್ಷಾಕ್ಕೆ ಪಿಕಪ್ ವಾಹನವನ್ನು ಡಿಕ್ಕಿ ಹೊಡೆಸಿ ಯುವತಿಯರ ಮೇಲೆ ದೌರ್ಜನ್ಯಕ್ಕೆ ಯತ್ನಿಸಿದ್ದ. ಪರಿಣಾಮ ಯುವತಿಯರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದವು. ಈ ಬಗ್ಗೆ ಧರ್ಮಸ್ಥಳ ಠಾಣೆಗೆ ಯುವತಿಯರು ದೂರು ನೀಡಿದ್ದರು.
ಈ ದೂರಿನಂತೆ ಆರೋಪಿಯ ವಿರುದ್ದ ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದರು. ನೆರಿಯದಲ್ಲಿಮಹಿಳೆಯರ ಮೇಲೆ ನಡೆದಕಿ ರುಕುಳದ ಹಿನ್ನಲೆಯಲ್ಲಿ ತಡರಾತ್ರಿಯ ವರೆಗೂ ನೂರಾರು ಸಂಖ್ಯೆಯಲ್ಲಿಜನ ಸೇರಿದ್ದರು. ಪ್ರಕರಣದ ಆರೋಪಿ ಥಾಮಸ್ ಈ ಹಿಂದೆಯೂ ಕೆಲವು ಕ್ರಿಮಿನಲ್ ಪ್ರಕರಣಗಳ ಆರೋಪಿಯಾಗಿದ್ದು ಈತನ ಅವಳಿ ಸಹೋದರ ಈ ಹಿಂದೆ ಅಪ್ರಾಪ್ತೆಯ ಮೇಲೆ ಅತ್ಯಾಚಾರ ಪ್ರಕರಣದಲ್ಲಿ ಜೈಲು ಸೇರಿದ್ದ ಈ ಹಿನ್ನಲೆಯಲ್ಲಿ ಸಾರ್ವಜನಿಕರು ಆಕ್ರೋಶಿತರಾಗಿ ನೂರಾರು ಸಂಖ್ಯೆಯಲ್ಲಿ ಅಣಿಯೂರು ಪೇಟೆಯಲ್ಲಿ ಜಮಾಯಿಸಿ ಪ್ರತಿಭಟನೆ ನಡೆಸಿದ್ದರು.
ಅನಾಹುತ ತಪ್ಪಿಸಿದ ಶಾಸಕ ಹರೀಶ ಪೂಂಜ:
ಘಟನಾ ಸ್ಥಳದಲ್ಲಿ ಭಾರೀ ಜನ ಸೇರಿರುವುದು ಮತ್ತು ಪ್ರತಿಭಟನೆ ನಡೆಸುವವರ ಮೇಲೆ ಪೋಲಿಸರು ಲಾಠಿಚಾರ್ಜ್ ಮಾಡುವಂತಹ ಸನ್ನಿವೇಶ ನಿರ್ಮಾಣವಾಗಿದೆ ಎಂಬ ಸುದ್ದಿ ತಿಳಿಯುತ್ತಿದ್ದಂತೆ ಶಾಸಕ ಹರೀಶ್ ಪೂಂಜಾ ರಾತ್ರೋರಾತ್ರಿ ಸ್ಥಳಕ್ಕೆ ದೌಡಾಯಿಸಿದ್ದರು. ಬಳಿಕ ಅವರು ಊರವರನ್ನು ಸಮಾಧಾನ ಪಡಿಸಿ ಯಾವುದೇ ಅಹಿತಕರ ಘಟನೆ ನಡೆಸದಂತೆ ತಿಳಿಸಿದ್ದಾರೆ.