ಉಪ್ಪಿನಂಗಡಿ, ಮಾ.05 (DaijiworldNews/MB) : ರಾಮ ಮಂದಿರ ನಿರ್ಮಾಣಕ್ಕೆ ಸಂಬಂಧಿಸಿ ಸ್ಟೇಟಸ್ ಹಾಕಿದ ಕಾರಣಕ್ಕಾಗಿ ಆದರ್ಶನಗರ ಎಂಬಲ್ಲಿ ಹಿಂದೂ ಯುವಕನೋರ್ವನ ಮನೆಯ ಬಳಿಗೆ ಬಂದು ಮುಸ್ಲಿಂ ಯುವಕ ಹಲ್ಲೆಗೆ ಯತ್ನಿಸಿದ ಘಟನೆಗೆ ಸಂಬಂಧಿಸಿ ಪೊಲೀಸರು ಮೂವರನ್ನು ಬಂಧಿಸಿರುವುದಾಗಿ ವರದಿಯಾಗಿದೆ.


ಆದರ್ಶನಗರದ ಮುಕುಂದ್ ಎಂಬವರು ತಮ್ಮ ವಾಟ್ಸಾಪ್ನಲ್ಲಿ ರಾಮ ಮಂದಿರ ವಿಚಾರಕ್ಕೆ ಸಂಬಂಧಿಸಿ ಸ್ಟೇಟಸ್ ಹಾಕಿದ್ದು ಈ ಸ್ಟೇಟಸ್ಗೆ ಉಬೈದ್ ಎಂಬಾತ ವಾಟ್ಸಾಪ್ ಮೂಲಕ ಪ್ರತಿಕ್ರಿಯೆ ನೀಡಿದ್ದಾನೆ ಎಂದು ಹೇಳಲಾಗಿದೆ. ಈ ವಿಚಾರದಲ್ಲೇ ಅವರಿಬ್ಬರ ನಡುವೆ ಚರ್ಚೆ ನಡೆದಿದ್ದು ಮಂಗಳವಾರ ಮುಕುಂದ್ ಮನೆಯ ಬಳಿಗೆ ಫರ್ಜೀನ್, ರಶೀದ್, ಉಬೈದ್ ಇದ್ದ ಯುವಕರ ಗುಂಪೊಂದು ಬಂದು ಮುಕುಂದ್ಗೆ ಹಲ್ಲೆ ನಡೆಸಲು ಯತ್ನಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು. ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
ಈ ಪ್ರಕರಣಕ್ಕೆ ಸಂಬಂಧಿಸಿ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು ಮೂವರನ್ನು ಬಂಧಿಸಲಾಗಿದೆ. ಇನ್ನುಳಿದವರ ಹುಡುಕಾಟ ನಡೆಯುತ್ತಿದೆ ಎಂದು ವರದಿಯಾಗಿದೆ.