ಮಂಗಳೂರು, ಮಾ.05 (DaijiworldNews/MB): ಪೊಲೀಸ್ ಕಸ್ಟಡಿಯಲ್ಲಿದ್ದ ಐಷಾರಾಮಿ ಕಾರುಗಳನ್ನು ಸಿಬಿಐ ಪೊಲೀಸರು ಮಾರಾಟ ಮಾಡಿದ ಪ್ರಕರಣವು ದಿನದಿಂದ ದಿನಕ್ಕೆ ಒಂದೊಂದು ತಿರುವು ಪಡೆಯುತ್ತಿದೆ. ನಾಲ್ವರು ಆರೋಪಿಗಳಲ್ಲಿ ಓರ್ವ ಆರೋಪಿ ಸಿಐಡಿ ಅಧಿಕಾರಿಯೊಂದಿಗೆ ದೂರವಾಣಿ ಮೂಲ ಮಾತುಕತೆ ನಡೆಸಿದ್ದಾನೆ ಎಂದು ಹೇಳಲಾಗಿದೆ.

ಸಾಂದರ್ಭಿಕ ಚಿತ್ರ
ಈ ಕಾರು ಮಾರಾಟ ಪ್ರಕರಣಕ್ಕೆ ಸಂಬಂಧಿಸಿ ಈಗಾಗಲೇ ನಾರ್ಕೋಟಿಸ್ ಡ್ರಗ್ ಇನ್ಸ್ಪೆಕ್ಟರ್ ರಾಮಕೃಷ್ಣ, ನಗರ ಅಪರಾಧ ವಿಭಾಗದ ಸಬ್ಇನ್ಸ್ಪೆಕ್ಟರ್ ಕಬ್ಬಳ್ ರಾಜ್, ಮುಖ್ಯ ಪೊಲೀಸ್ ಕಾನ್ಸ್ಟೆಬಲ್ಗಳಾದ ಆಶಿತ್ ಡಿಸೋಜ ಮತ್ತು ರಾಜಾ ಅವರನ್ನು ಅಮಾನತು ಮಾಡಲಾಗಿದೆ.
ಆದರೆ ಈ ಆರೋಪಿಗಳಲ್ಲಿ ಒಬ್ಬಾತ ಸಿಐಡಿ ಅಧಿಕಾರಿಗೆ ದೂರವಾಣಿ ಮೂಲಕ ಕರೆ ಮಾಡಿದ್ದಾನೆ ಎಂದು ವರದಿಯಾಗಿದೆ. ಅಷ್ಟೇ ಅಲ್ಲದೆ ಈ ವಿಚಾರ ಗೃಹ ಇಲಾಖೆ ಮತ್ತು ಹಿರಿಯ ಸಿಐಡಿ ಅಧಿಕಾರಿಗಳ ಗಮನಕ್ಕೂ ಬಂದಿದೆ ಎಂದು ಹೇಳಲಾಗಿದೆ.
ಪೊಲೀಸ್ ಕಸ್ಟಡಿಯಲ್ಲಿದ್ದ ಐಷಾರಾಮಿ ಕಾರುಗಳನ್ನು ಸಿಬಿಐ ಪೊಲೀಸರು ಮಾರಾಟ ಮಾಡಿದ್ದು ಮಾತ್ರವಲ್ಲದೆ, 2019 ರ ಅಕ್ಟೋಬರ್ನಲ್ಲಿ ಸಿಸಿಬಿ ಪೊಲೀಸರು ಮಹಿಳೆಯೊಬ್ಬರು ನಿರ್ವಹಿಸುತ್ತಿದ್ದ ಹಾಲಿನ ಡೈರಿಗೆ ನುಗ್ಗಿ ಅಲ್ಲಿ ದೊರೆತ 86,000 ರೂ.ಗಳ ಹಣವನ್ನು ತೆಗೆದುಕೊಂಡು ಹೋಗಿದ್ದಾರೆ ಎಂದು ದೂರಲಾಗಿದೆ. ಈ ಘಟನೆಯ ಬಗ್ಗೆ ತಾನು ಪೊಲೀಸರಿಗೆ ದೂರು ನೀಡಿದ್ದೇನೆ ಆದರೆ ಈವರೆಗೆ ತನಗೆ ನ್ಯಾಯ ದೊರೆತಿಲ್ಲ ಎಂದೂ ಮಹಿಳೆ ಆರೋಪಿಸಿದ್ದಾರೆ.