ಉಳ್ಳಾಲ, ಜು 31: ಆಡಳಿತ ಪಕ್ಷದ ಕೌನ್ಸಿಲರುಗಳ ದಬ್ಬಾಳಿಕೆ ಹಾಗೂ ಭ್ರಷ್ಟಾಚಾರ, ವಾರ್ಡುಗಳ ಅಭಿವೃದ್ಧಿಯಲ್ಲಿ ತಾರತಮ್ಯದಿಂದ ನಗರಸಭೆಯಲ್ಲಿ ಅಭಿವೃದ್ಧಿ ಕುಂಠಿತವಾಗಿದೆ. ಉಳ್ಳಾಲ ನಗರಸಭೆಯ ಆಡಳಿತ ಸಂಪೂರ್ಣ ಕುಸಿದಿದೆ ಎಂದು ಕರ್ನಾಟಕ ಪ್ರದೇಶ ಜನತಾದಳದ ರಾಜ್ಯ ಪ್ರಧಾನ ಕಾರ್ಯದರ್ಶಿ ದಿನಕರ ಉಳ್ಳಾಲ್ ಬೇಸರ ವ್ಯಕ್ತಪಡಿಸಿದರು.
ಉಳ್ಳಾಲ ನಗರಸಭೆಯ ದುರಾಡಳಿತದ ವಿರುದ್ಧ ಉಳ್ಳಾಲ ನಗರ ಜಾತ್ಯತೀತ ಜನತಾದಳದ ವತಿಯಿಂದ ಮಂಗಳವಾರ ನಡೆದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಅವರು ಇತ್ತೀಚಿನ ವರ್ಷಗಳಲ್ಲಿ ಉಳ್ಳಾಲ ನಗರ ಸಭೆಗೆ ನಾಗರೀಕರಿಗೆ ಮೂಲಭೂತ ಸೌಕರ್ಯಗಳಾದ ರಸ್ತೆ, ಕುಡಿಯುವ ನೀರು, ವಿದ್ಯುತ್, ಒಳಚರಂಡಿ, ವಸತಿ, ಖಾತೆ ಬದಲಾವಣೆ, ಸಿಂಗಲ್ ಸೈಟ್, ಕಸ ವಿಲೇವಾರಿ ವಿಳಂಬ, ಸೇರಿದಂತೆ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಲು ಸಾಧ್ಯವಾಗಿಲ್ಲ. ಉಳ್ಳಾಲಕ್ಕೆ ಬೇಡಿಕೆಯಾಗಿರುವ ಉದ್ಯಾನವನ, ಕ್ರೀಡಾ ಮೈದಾನ, ಈಜುಕೊಳ ನಿರ್ಮಾಣಕ್ಕೆ ಇನ್ನೂ ಕ್ರಮಕೈಗೊಂಡಿಲ್ಲ ಎಂದು ಆರೋಪಿಸಿದ ಅವರು ಭ್ರಷ್ಟಾಚಾರದಲ್ಲಿ ಇಲ್ಲಿನ ಆಡಳಿತ ಪಕ್ಷದ ಕೌನ್ಸಿಲರ್ ಗಳು ಮುಂದಿದ್ದಾರೆ ಎಂದರು.