ಮಂಗಳೂರು, ಮಾ.05 (DaijiworldNews/PY): 3-4 ತಿಂಗಳ ಮಕ್ಕಳನ್ನು ಕಾನೂನು ಬಾಹಿರವಾಗಿ ಮಾರಾಟ ಮಾಡುತ್ತಿದ್ದ ಆರೋಪಿ ಹಾಗೂ ಇಬ್ಬರು ಮಹಿಳೆಯರನ್ನು ಮಂಗಳೂರಿನಲ್ಲಿ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಯನ್ನು ಮೂಲ್ಕಿ ನಿವಾಸಿ ರಾಯನ್ (30) ಎಂದು ಗುರುತಿಸಲಾಗಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪೊಲೀಸ್ ಕಮಿಷನರ್ ಎನ್.ಶಶಿಕುಮಾರ್ ಅವರು, "ಮೈಸೂರಿನ ಒಡನಾಡಿ ಎನ್ಜಿಓ ಸಂಸ್ಥೆಯು ಪೊಲೀಸರನ್ನು ಸಂಪರ್ಕಿಸಿದ್ದು, ದ.ಕ ಜಿಲ್ಲೆಯ ವ್ಯಕ್ತಿಯೋರ್ವ ಮಕ್ಕಳ ಮಾರಾಟ ಜಾಲದಲ್ಲಿ ಭಾಗಿಯಾಗಿದ್ದಾನೆ. ಗಂಡು ಮಗುವಿಗೆ 6 ಲಕ್ಷ, ಹೆಣ್ಣು ಮಗುವಿಗೆ 4 ಲಕ್ಷ. ರೂ.ಗಳಾಗಿದ್ದು, 1.5 ಲಕ್ಷ. ರೂ.ಗಳನ್ನು ಮುಂಗಡ ಪಾವತಿಯನ್ನು ಒಂದು ತಿಂಗಳೊಳಗೆ ತಲುಪಿಸಲಾಗುತ್ತದೆ. ವಿಚಾರಣೆಯ ಸಂದರ್ಭ ಕಾರ್ಕಳದ ಕವಿತಾ ಎಂಬಾಕೆ ಮಹಿಳೆಗೆ ಮೂರು ಲಕ್ಷ. ರೂ. ನೀಡಿ ಹಾಸನದಿಂದ ಮಗುವನ್ನು ತಂದಿದ್ದಾಳೆ" ಎಂದು ತಿಳಿಸಿದ್ದಾರೆ.
"ಪ್ರಕರಣಕ್ಕೆ ಸಂಬಂಧಿಸಿದಂತೆ ಸೂಕ್ತವಾದ ತನಿಖೆಯ ಅವಶ್ಯಕತೆ ಇದೆ. ಆರೋಪಿಯಿಂದ ಕವಿತಾ ಮಗುವನ್ನು ಖರೀದಿಸಿದ್ದಾಳೆ. ಬಳಿಕ ಮಗುವನ್ನು ಮರಿಯಾಮ್ ಎಂಬಾಕೆಗೆ ಮಾರಾಟ ಮಾಡಿದ್ದಾಳೆ ಎಂದು ತನಿಖೆಯಿಂದ ತಿಳಿದುಬಂದಿದೆ. ವಿಚಾರಣೆ ನಡೆಸಿದ ಸಂದರ್ಭ ತಿಳಿದುಬಂದ ಆರೋಪಿಗಳ ಹೇಳಿಕೆ ಸ್ಪಷ್ಟವಾಗಿಲ್ಲ. ಹಾಗಾಗಿ ಇವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಪೊಲೀಸ್ ಕಸ್ಟಡಿಗೆ ನೀಡಲು ಮನವಿ ಮಾಡಲಿದ್ದೇವೆ" ಎಂದು ಹೇಳಿದ್ದಾರೆ.
"ಸೂಕ್ತ ತನಿಖೆಯ ಅಗತ್ಯವಿದೆ. ಒಂದು ವೇಳೆ ಇದು ಅಪಹರಣಕ್ಕೊಳಗಾದ ಮಗುವಾದಲ್ಲಿ, ಬೇರೆ ಪೊಲೀಸ್ ಠಾಣೆಗಳಲ್ಲಿ ಈ ಬಗ್ಗೆ ದೂರು ದಾಖಲಾಗಿದೆಯೇ ಎನ್ನುವುದನ್ನು ಪರಿಶೀಲಿಸಬೇಕಿದೆ" ಎಂದು ತಿಳಿಸಿದ್ದಾರೆ.
ಮಾಧ್ಯಮದೊಂದಿಗೆ ಮಾತನಾಡಿದ ಎನ್ಜಿಓ ಸಂಸ್ಥೆಯ ಸಿದ್ದಾಂತ್ ಅವರು, "ನಾವು 30 ವರ್ಷಗಳಿಂದ ಮಾನವ ಕಳ್ಳಸಾಗಣೆ ವಿರುದ್ದ ಕೆಲಸ ಮಾಡುತ್ತಿದ್ದೇವೆ. ಹಾಗಾಗಿ ಪೊಲೀಸರೊಂದಿಗೆ ನಿಕಟ ಸಂಬಂಧ ಹೊಂದಿದ್ದೇವೆ. ಒಂದೂವರೆ ತಿಂಗಳ ಹಿಂದೆ, ದ.ಕ ಜಿಲ್ಲೆಯ ವ್ಯಕ್ತಿಯೋರ್ವ ಗಂಡು ಮಗುವನ್ನು 6 ಲಕ್ಷ ಹಾಗೂ ಹೆಣ್ಣು ಮಗುವನ್ನು 4 ಲಕ್ಷ. ರೂ.ಗೆ ಮಾರಾಟ ಮಾಡುವ ಜಾಲದಲ್ಲಿ ತೊಡಗಿದ್ದಾನೆ ಎಂದು ನಮಗೆ ಕರೆ ಬಂದಿತ್ತು" ಎಂದಿದ್ದಾರೆ.
"ಎನ್ಜಿಓಗಳಾದ ನಾವು ಆರೋಪಿಯ ಸಂಖ್ಯೆಯನ್ನು ಕಂಡುಹಿಡಿಯಲು ಪ್ರಯತ್ನಿಸಿದ್ದೇವೆ. ಗಂಭೀರ ಪ್ರಕರಣವಾದ ಕಾರಣ ಪ್ರಕರಣದ ಬಗ್ಗೆ ಆಳವಾಗಿ ಹೋಗಿ ಆರೋಪಿಯ ಸಂಖ್ಯೆಯನ್ನು ಪತ್ತೆ ಹಚ್ಚಿದೆ. ಗ್ರಾಹಕರ ಸೋಗಿನಲ್ಲಿ ನಾನು ಆರೋಪಿಯನ್ನು ಸಂಪರ್ಕಿಸಿದೆ. ಆರೋಪಿಯು ರಾಜ್ಯ ವ್ಯಾಪ್ತಿ ಜಾಲವನ್ನು ಹೊಂದಿದ್ದಾನೆ. ಆತ ಶಿವಮೊಗ್ಗ, ಹಾಸನ, ಬೆಂಗಳೂರಿನ ವೈದ್ಯರ ಬಗ್ಗೆ ಮಾತನಾಡಿದ್ದ. ಮುಂಗಡವಾಗಿ ಆತನಿಗೆ 1.5 ಲಕ್ಷ. ರೂ. ನೀಡಬೇಕಿತ್ತು. ಹಾಗಾಗಿ ನಾನು ಪೊಲೀಸರೊಂದಿಗೆ ಈ ಬಗ್ಗೆ ಚರ್ಚೆ ನಡೆಸಿದ್ದು, ಮಂಗಳೂರಿನಲ್ಲಿ ಭೇಟಿಯಾಗಲು ಹೇಳಿದ್ದೆ. ತನಿಖೆಯ ಸಂದರ್ಭ ಐದು ತಿಂಗಳ ಮಗುವನ್ನು ಮಾರಾಟ ಮಾಡಲಾಗಿದೆ" ಎಂದು ತಿಳಿದುಬಂದಿದೆ ಎಂದು ಹೇಳಿದ್ದಾರೆ.
"ಅನಗತ್ಯ ಗರ್ಭಧಾರಣೆಯಿಂದ ಮಗು ಬಂದಿದೆ ಎನ್ನುವ ಅನುಮಾನವಿದೆ. ಏಕೆಂದರೆ, ನಾವು ಸಾಕಷ್ಟು ಪೋಕ್ಸೋ ಪ್ರಕರಣಗಳನ್ನು ನೋಡಬಹುದಾಗಿದೆ. ಆರೋಪಿಗಳನ್ನು ಅವುಗಳನ್ನು ಗುರಿಯಾಗಿಸಿಕೊಂಡು ಮಗುವಿನ ಅಕ್ರಮ ದಾಖಲೆಗಳನ್ನು ನಿರ್ಮಿಸುವ ಸಾಧ್ಯತೆಗಳಿವೆ" ಎಂದಿದ್ದಾರೆ.