ಕಾಸರಗೋಡು, ಆ 1: ಉಪ್ಪಳ ಮಂಗಲ್ಪಾಡಿ ಕುಕ್ಕಾರು ಸರಕಾರಿ ಶಾಲೆಯಲ್ಲಿ ಗಣಿತ ಪಾಠಕ್ಕೆ ಮಲಯಾಳ ಶಿಕ್ಷಕರ ನೇಮಕ ವಿವಾದ ನಿನ್ನೆ ನಡೆದ ಜಿಲ್ಲಾ ಪಂಚಾಯತ್ ಸಾಮಾನ್ಯ ಸಭೆಯಲ್ಲಿ ಪ್ರತಿಧ್ವನಿಸಿತು. ಈ ಬಗ್ಗೆ ಸದಸ್ಯರಾದ ಹರ್ಷಾದ್ ವರ್ಕಾಡಿ ಮತ್ತು ಫರೀದಾ ಝಕೀರ್ ಠರಾವು ಮಂಡಿಸಿ ಕೂಡಲೇ ಮಲಯಾಳ ಶಿಕ್ಷಕರನ್ನು ವರ್ಗಾಹಿಸಿ ಕನ್ನಡ ಶಿಕ್ಷಕರನ್ನು ನೇಮಿಸುವಂತೆ ಈ ಬಗ್ಗೆ ಶಿಕ್ಷಣ ಇಲಾಖೆ ಕ್ರಮ ತೆಗೆದುಕೊಳ್ಳುವಂತೆ ಒತ್ತಾಯಿಸಿದರು.
ಇದಕ್ಕೆ ಧ್ವನಿಗೂಡಿಸಿದ ಸದಸ್ಯ ಕೆ. ಶ್ರೀಕಾಂತ್ ಜಿಲ್ಲಾ ಪಂಚಾಯತ್ ನಿರ್ಣಯ ಮಂಡಿಸಿ ಪ್ರಯೋಜನ ಇಲ್ಲ. ಅಲ್ಲಿನ ಮಕ್ಕಳ ಪರಿಸ್ಥಿತಿಯನ್ನು ಮನಗಾಣಬೇಕು. ಕನ್ನಡ ಮಕ್ಕಳಿಗೆ ಮಲಯಾಳದಲ್ಲಿ ಪಾಠ ಮಾಡಿದರೆ ಅರ್ಥವಾದೀತೇ? ಎಂದು ಪ್ರಶ್ನಿಸಿದರು. ಮಲಯಾಳ ಶಿಕ್ಷಕನ ನೇಮಕದ ಬಗ್ಗೆ ರಾಜ್ಯ ಶಿಕ್ಷಣ ಸಚಿವರಿಗೂ ಪತ್ರ ಬರೆಯಲಾಗಿದೆ. ಕಾನೂನು ವಿರುದ್ಧವಾಗಿ ಶಿಕ್ಷಕರನ್ನು ನೇಮಿಸಲಾಗಿದೆ ಎಂದು ಶ್ರೀಕಾಂತ್ ಆರೋಪಿಸಿದರು.
ಕನ್ನಡ ಶಾಲೆಗೆ ಮಲಯಾಳ ಶಿಕ್ಸಕರನ್ನು ನೇಮಕ ಮಾಡಿದವರ ವಿರುದ್ಧ ಕ್ರಮ ತೆಗೆದು ಕೊಳ್ಳಬೇಕು. ಸಾ೦ವಿಧಾನಿಕ ಹಕ್ಕುಗಳನ್ನು ಕಸಿಯಲಾಗುತ್ತಿದೆ . ಕನ್ನಡ ಶಾಲೆಗಳಲ್ಲಿ ಮಲಯಾಳ ಶಿಕ್ಷಕರನ್ನು ನೇಮಿಸುವ ಮೂಲಕ ಮಲಯಾಳ ಹೇರಿಕೆ ಹುನ್ನಾರ ನಡೆಯುತ್ತಿದೆ ಎಂದು ಸದಸ್ಯರು ಆರೋಪಿಸಿದರು. ಕನ್ನಡ ಶಾಲೆಗಳಲ್ಲಿ ಮಲಯಾಳ ಶಿಕ್ಷಕರ ನೇಮಕ ಗಂಭೀರ ವಿಷಯವಾಗಿದ್ದು, ಇದರಿಂದ ಈ ಬಗ್ಗೆ ಜಿಲ್ಲಾ ಪಂಚಾಯತ್ ಗಂಭೀರವಾಗಿ ತೆಗೆದುಕೊಂಡಿದೆ ಎಂದು ಜಿಲ್ಲಾ ಪಂಚಾಯತ್ ಅಧ್ಯಕ್ಷ ಎ .ಜಿ . ಸಿ ಬಶೀರ್ ಹೇಳಿದರು.
ಮಂಗಲ್ಪಾಡಿ ಸರಕಾರಿ ಶಾಲೆಯ ಕನ್ನಡ ಮಾಧ್ಯಮಕ್ಕೆ ನೇಮಿಸಿರುವ ಮಲಯಾಳ ಶಿಕ್ಷಕನನ್ನು ಅಲ್ಲಿಂದ ವರ್ಗಾಯಿಸಿ ಕನ್ನಡ ಗಣಿತ ಶಿಕ್ಷಕನನ್ನು ಕೂಡಲೇ ನೇಮಿಸುವಂತೆ ಜಿಲ್ಲಾ ಶಿಕ್ಷಣ ಉಪನಿರ್ದೇಶಕರಿಗೆ ಸೂಚನೆ ನೀಡಲು ಜಿಲ್ಲಾ ಪಂಚಾಯತ್ ನಿರ್ಣಯ ತೆಗೆದುಕೊಂಡಿತು. ಈ ಬಗ್ಗೆ ಗಮನ ಹರಿಸದಿದ್ದಲ್ಲಿ ಮುಂದಿನ ದಿನಗಳಲ್ಲಿ ಕಾನೂನು ಹೋರಾಟದ ಬಗ್ಗೆ ಚಿಂತನೆ ನಡೆಸಲು ಸಭೆ ನಿರ್ಣಯ ತೆಗೆದುಕೊಂಡಿತು.