ಮಂಗಳೂರು, ಮಾ. 05 (DaijiworldNews/SM): ನಗರದ ಹೊರ ವಲಯದ ಮರವೂರು ಕೆಂಜಾರುವಿನಲ್ಲಿ ಕಪಿಲ ಗೋಶಾಲೆ ಕೆಡವಿದ ವಿಚಾರಕ್ಕೆ ಸಂಬಂಧಿಸಿದಂತೆ ಆರ್ ಎಸ್ ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಪ್ರತಿಕ್ರಿಯೆ ನೀಡಿದ್ದು, ಸ್ಥಳೀಯ ಮುಸಲ್ಮಾನರಿಗೆ ಅರ್ಧ ಬೆಲೆಗೆ ಗೋವುಗಳು ಸಿಗುತ್ತವೆ. ಕದಿಯುವ ಅಗತ್ಯವಿಲ್ಲ ಎಂಬುವುದಾಗಿ ಮುಸ್ಲಿಮರೇ ತಿಳಿಸಿದ್ದಾರೆ ಎಂದು ಕಲ್ಲಡ್ಕ ಪ್ರಭಾಕರ್ ಭಟ್ ತಿಳಿಸಿದ್ದಾರೆ.

ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿರುವ ಕಲ್ಲಡ್ಕ ಪ್ರಭಾಕರ್ ಭಟ್, ಯಾರೇ ಒಬ್ಬ ಗೋವು ಸಾಕುವವನಿದ್ದಲ್ಲಿ ಆತನಿಗೆ ನಾವು ಬೆಂಬಲ ನೀಡಬೇಕು. ಆದರೆ, ಕಪಿಲ ಗೋಶಾಲೆ ಇರುವ ಜಾಗ ಕೋಸ್ಟ್ ಗಾರ್ಡ್ ಹೆಸರಲ್ಲಿದೆ. ಈ ಕಾರಣಕ್ಕೆ ಸರಕಾರ ಕೂಡ ಗೋಶಾಲೆ ತೆರವುಗೊಳಿಸಲು ತಿಳಿಸಿತ್ತು. ಆದರೆ, ಪ್ರಕಾಶ್ ಶೆಟ್ಟಿ ಗೋಶಾಲೆ ತೆರವುಗೊಳಿಸದೇ ಇದ್ದಂತಹ ಸಂದರ್ಭದಲ್ಲಿ ಸರಕಾರವೇ ಗೋಶಾಲೆಯನ್ನು ತೆರವುಗೊಳಿಸಿದೆ ಎಂದು ಭಟ್ ಪ್ರತಿಕ್ರಿಯೆ ನೀಡಿದ್ದಾರೆ.
ಇನ್ನು ಹಲವಾರು ಗೋ ರಕ್ಷಕರು ಪ್ರಕಾಶ್ ಶೆಟ್ಟಿಯವರ ಗೋಶಾಲೆಗೆ ಗೋವುಗಳನ್ನು ನೀಡಲಾರಂಭಿಸಿದರು. ಆದರೆ, ಪ್ರಕಾಶ್ ಶೆಟ್ಟಿ ಮಾತ್ರ ಇದನ್ನೇ ಬಂಡವಾಳವಾಗಿರಿಸಿ ಅಕ್ರಮ ಕಾರ್ಯಗಳಲ್ಲಿ ಭಾಗಿಗಳಾಗಿದ್ದಾರೆ. ಅಲ್ಲದೆ, ಇಟ್ಟಿಗೆ ಕಾರ್ಖಾನೆ ಹಾಗೂ ಮರಳುಗಾರಿಯ ಮೂಲಕ ಅಕ್ರಮದಲ್ಲಿ ತೊಡಗಿಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ. ಪ್ರಕಾಶ್ ಶೆಟ್ಟಿಯವರು ಅವ್ಯವಹಾರ ನಡೆಸಲು ಇದು ಪೂರಕವಾಗಿದೆ ಎಂದು ಕಲ್ಲಡ್ಕ ಪ್ರಭಾಕರ್ ಭಟ್ ಅವರು ಆರೋಪಿಸಿದ್ದಾರೆ.
ಅಲ್ಲದೆ, ಇವರ ಗೋಶಾಲೆಯ ಮೂಲಕ ಸ್ಥಳೀಯ ಮುಸಲ್ಮಾನರಿಗೆ ಅರ್ಧ ಬೆಲೆಯಲ್ಲಿ ಗೋವುಗಳು ಸಿಗುತ್ತಿದ್ದು, ಕದಿಯುವ ಅಗತ್ಯವಿಲ್ಲ ಎಂದು ಮುಸಲ್ಮಾನರೇ ತಿಳಿಸಿದ್ದಾರೆ ಎಂದು ಕಲ್ಲಡ್ಕ ಭಟ್ ಗಂಭೀರ ಆರೋಪ ಮಾಡಿದ್ದಾರೆ.