ಮಂಗಳೂರು, ಮಾ. 05 (DaijiworldNews/SM): ನಗರದ ಹೊರ ವಲಯದ ಕೆಂಜಾರುವಿನಲ್ಲಿ ಕಪಿಲ ಗೋಶಾಲೆಯ ಮೂಲಕ ಅಕ್ರಮ ಕಸಾಯಿಖಾನೆಗೆ ಗೋವುಗಳನ್ನು ನೀಡಲಾಗುತ್ತವೆ ಎನ್ನುವ ಪ್ರಭಾಕರ ಭಟ್ ಅವರ ಆರೋಪಕ್ಕೆ ಗೋಶಾಲೆಯ ಮಾಲಕ ಪ್ರಕಾಶ್ ಶೆಟ್ಟಿ ಪ್ರತಿಕ್ರಿಯೆ ನೀಡಿದ್ದು, ಧರ್ಮಸ್ಥಳ ಶ್ರೀ ಮಂಜುನಾಥ ಕ್ಷೇತ್ರಕ್ಕೆ ಆಣೆ ಪ್ರಮಾಣಕ್ಕೆ ಬನ್ನಿ ಎಂದು ಸವಾಲೆಸೆದಿದ್ದಾರೆ.

ದೈಜಿವರ್ಲ್ಡ್ ವಾಹಿನಿಯ ನೇರ ಪ್ರಸಾರದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಲ್ಲಡ್ಕ ಪ್ರಭಾಕರ್ ಭಟ್ ಅವರು ಕಪಿಲ ಗೋಶಾಲೆಯಿಂದ ಸ್ಥಳೀಯ ಮುಸಲ್ಮಾನರಿಗೆ ಅರ್ಧ ಬೆಲೆಗೆ ಗೋವುಗಳನ್ನು ನೀಡುತ್ತಿದ್ದಾರೆ. ಈ ಬಗ್ಗೆ ಮುಸಲ್ಮಾನರೇ ತಿಳಿಸಿದ್ದಾರೆ ಎನ್ನುವ ಆರೋಪ ಮಾಡಿದ್ದು, ಧರ್ಯವಿದ್ದಲ್ಲಿ ಧರ್ಮಸ್ಥಳ ಶ್ರೀ ಮಂಜುನಾಥ ಕ್ಷೇತ್ರಕ್ಕೆ ಬನ್ನಿ ಮತ್ತು ಆಣೆ ಪ್ರಮಾಣ ಮಾಡಿ ಎಂಬುವುದಾಗಿ ಸವಾಲೆಸೆದಿದ್ದಾರೆ.
ಕಲ್ಲಡ್ಕ ಪ್ರಭಾಕರ್ ಭಟ್ ಹಿಂದೂ ಧರ್ಮದ ಮುಖಂಡರಾಗಿದ್ದಾರೆ. ಅವರು ಹಿರಿಯರು. ಅವರು, ನಮ್ಮ ಗೋಶಾಲೆಯ ಬಗ್ಗೆ ಸರಿಯಾದ ಮಾಹಿತಿ ಹೊಂದಿಲ್ಲ. ಬದಲಾಗಿ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಕೇವಲ ನಾಲ್ಕಾರು ಗೋವುಗಳಿರುವ ಹಟ್ಟಿ ಎನ್ನುವುದಾಗಿ ಹೇಳಿದ್ದಾರೆ. ಆದರೆ, ಇವರು ಯಾವುದೇ ವಿಚಾರ ತಿಳಿಯದೆ ಮಾತನಾಡಿದ್ದಾರೆ. ಕಲ್ಲಡ್ಕ ಭಟ್ ಅವರ ಮೇಲೆ ನನಗೆ ಗೌರವವಿದೆ. ನಮ್ಮ ಹಿರಿಯರ ಗೌರವವನ್ನೇ ನೀಡುತ್ತೇನೆ. ಅವರೊಂದಿಗೆ ಧರ್ಮಸ್ಥಳದಲ್ಲಿ ಆಣೆ ಪ್ರಮಾಣ ಮಾಡಲು ನಾನು ಸಿದ್ಧನಿದ್ದೇನೆ ಎಂದು ಪುನರುಚ್ಚರಿಸಿದ್ದಾರೆ. ಒಂದೊಮ್ಮೆ ನಾನು ತಪ್ಪು ಮಾಡಿದ್ದಲ್ಲಿ ನನ್ನ ಕುತ್ತಿಗೆ ಕಡಿಯುವುದಾದರೂ ಅದಕ್ಕೆ ಅವಕಾಶವಿದೆ. ಆದರೆ, ಈ ಮೂಖ ಗೋವುಗಳಿಗೆ ಯಾವ ಕಾರಣಕ್ಕೆ ಅನ್ಯಾಯ ಎಸಗಿದ್ದೀರ ಎಂದು ಪ್ರಶ್ನಿಸಿದ್ದಾರೆ.