ಮಂಗಳೂರು, ಆ 1: ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಉಬರಡ್ಕ-ಮಿತ್ತೂರು ಗ್ರಾಮ ಪಂಚಾಯತ್ನಲ್ಲಿ 2015-16ನೇ ಸಾಲಿನಲ್ಲಿ ಕಾಂಪೋಸ್ಟ್ ಪೈಪ್ ಖರೀದಿಯಲ್ಲಿ ಆದ ದುರುಪಯೋಗದ ಬಗ್ಗೆ ಭ್ರಷ್ಟಾಚಾರ ನಿಗ್ರಹ ದಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗ್ರಾಮ ಪಂಚಾಯತ್ ಅಧ್ಯಕ್ಷ ಹರೀಶ್, ಪಂಚಾಯತ್ ಅಭಿವೃದ್ದಿ ಅಧಿಕಾರಿ ಪ್ರವೀಣ್ ಕುಮಾರ್ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ನ ಸಂಪೂರ್ಣ ಸ್ವಚ್ಛತಾ ಆಂದೋಲನದ ನೋಡಲ್ ಅಧಿಕಾರಿಯಾಗಿದ್ದ ರೋಹಿತ್ ಎ.ಆರ್. ಮೇಲೆ ಪ್ರಕರಣ ದಾಖಲಾಗಿರುತ್ತದೆ.
ಈಗಾಗಲೇ ದ.ಕ ಜಿಲ್ಲಾ ಪಂಚಾಯತ್ ವ್ಯಾಪ್ತಿಯ 7 ಪಂಚಾಯತ್ಗಳ ಅಧಿಕಾರಿಗಳ ಮೇಲೆ ನಿರ್ಮಲ ಗ್ರಾಮ ಪುರಸ್ಕಾರ ಯೋಜನೆಯ ಕಾಂಪೋಸ್ಟ್ ಪೈಪ್ ಖರೀದಿಯಲ್ಲಿ ನಡೆಸಿದ ಅವ್ಯವಹಾರಗಳ ಕುರಿತು ಪ್ರಕರಣಗಳು ದಾಖಲಾಗಿ ತನಿಖೆಯಲ್ಲಿದೆ
ಭ್ರಷ್ಟಾಚಾರ ನಿಗ್ರಹ ದಳ, ಪಶ್ಚಿಮ ವಲಯದ ಆರಕ್ಷಕ ಅಧೀಕ್ಷಕಿ ಶ್ರುತಿ ಎನ್.ಎಸ್. ಮಾರ್ಗದರ್ಶನದಲ್ಲಿ ಡಿ.ವೈ.ಎಸ್.ಪಿ. ಸುಧೀರ್ ಹೆಗಡೆ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ. ಪೊಲೀಸ್ ಇನ್ಸ್ಪೆಕ್ಟರ್ ಯೋಗೀಶ್ ಕುಮಾರ್ ಈ ಪ್ರಕರಣಗಳ ಪೂರ್ವಭಾವಿ ವಿಚಾರಣೆ ನಡೆಸಿರುತ್ತಾರೆ ಎಂದು ಎಸಿಬಿ ಪ್ರಕಟಣೆಯಲ್ಲಿ ತಿಳಿಸಿದೆ.