ಮಂಗಳೂರು ಆಗಸ್ಟ್ 1: ಬೈಕಂಪಾಡಿಯಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ಪ್ರಸ್ತಾವಿತ ಟ್ರಕ್ ಟರ್ಮಿನಲ್ ಕಾಮಗಾರಿಗೆ ರಾಜ್ಯ ಸರಕಾರ ಶೀಘ್ರವೇ ಮಂಜೂರಾತಿ ನೀಡಲಿದೆ ಎಂದು ನಗರಾಭಿವೃದ್ಧಿ ಮತ್ತು ವಸತಿ ಸಚಿವ ಯು.ಟಿ. ಖಾದರ್ ತಿಳಿಸಿದ್ದಾರೆ.
ಅವರು ಬುಧವಾರ ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿ ಕೆನರಾ ಸಣ್ಣ ಕೈಗಾರಿಕಾ ಒಕ್ಕೂಟದ ವತಿಯಿಂದ ನಡೆದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು. ಪಣಂಬೂರು ಎನ್.ಎಂ.ಪಿ.ಟಿ, ಬೈಕಂಪಾಡಿ ಮತ್ತು ಸುರತ್ಕಲ್ ಸುತ್ತಮುತ್ತಲ ಪ್ರದೇಶಗಳಲ್ಲಿ ಸಾಕಷ್ಟು ಸಣ್ಣ ಹಾಗೂ ಬೃಹತ್ ಕೈಗಾರಿಕೆಗಳು ಕಾರ್ಯಾಚರಿಸುತ್ತಿವೆ. ಇದರಿಂದಾಗಿ ಈ ಪ್ರದೇಶಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಲಾರಿ, ಟ್ಯಾಂಕರ್ ಸೇರಿದಂತೆ ಘನ ವಾಹನಗಳು ಸಂಚರಿಸುತ್ತಿವೆ. ಆದರೆ ಇವುಗಳಿಗೆ ನಿಲ್ಲಲು ಟ್ರಕ್ ಟರ್ಮಿನಲ್ ಇಲ್ಲದಿರುವುದರಿಂದ ಎಲ್ಲೆಂದರಲ್ಲಿ ಲಾರಿಗಳು ನಿಂತು ಸಾರ್ವಜನಿಕರ ಸುಗಮ ಸಂಚಾರಕ್ಕೆ ತೊಂದರೆಯಾಗುತ್ತಿರುವ ಬಗ್ಗೆ ರಾಜ್ಯ ಸರಕಾರದ ಗಮನಕ್ಕೆ ಬಂದಿದ್ದು, ಹಿಂದಿನ ಸರಕಾರದ ಅವಧಿಯಲ್ಲೇ ಬೈಕಂಪಾಡಿ ಸಮೀಪ ಟ್ರಕ್ ಟರ್ಮಿನಲ್ ಸ್ಥಾಪನೆಗೆ ಪ್ರಸ್ತಾವನೆ ರಾಜ್ಯ ಸರಕಾರಕ್ಕೆ ಬಂದಿದೆ ಎಂದು ಸಚಿವರು ತಿಳಿಸಿದರು.
ಈಗಾಗಲೇ ಅಧಿಕಾರಿಗಳು ಭೇಟಿ ನೀಡಿ ಟ್ರಕ್ ಟರ್ಮಿನಲ್ ಸ್ಥಾಪನೆಗೆ ಜಾಗ ಗುರುತಿಸಿದ್ದು, ಈ ಸಂಬಂಧ ಕಡತ ಹಣಕಾಸು ಇಲಾಖೆಯಲ್ಲಿದೆ. ಶೀಘ್ರವೇ ಇದಕ್ಕೆ ಅನುಮೋದನೆ ನೀಡಿ ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದು ಸಚಿವರು ತಿಳಿಸಿದರು.
ಕೈಗಾರಿಕಾ ಪ್ರದೇಶದಲ್ಲಿ ದುಡಿಯುತ್ತಿರುವ ಕಾರ್ಮಿಕರಿಗೆ ಸಮೀಪದಲ್ಲೇ ಕಡಿಮೆ ವೆಚ್ಚದಲ್ಲಿ ಮನೆ ನಿರ್ಮಿಸಿ ಒದಗಿಸುವ ಯೋಜನೆ ರಾಜ್ಯ ಸರಕಾರಕ್ಕಿದೆ. ಶೀಘ್ರವೇ ಇದನ್ನು ಜಾರಿಗೆ ತರಲಾಗುವುದು ಎಂದ ಸಚಿವರು, ಜಿಲ್ಲೆಯ ಬೃಹತ್ ಹಾಗೂ ಸಣ್ಣ ಕೈಗಾರಿಕೆಗಳ ಅಭಿವೃದ್ಧಿಗೆ ಉತ್ತೇಜನ ನೀಡಿ, ದೂರದೃಷ್ಟಿತ್ವದ ಯೋಜನೆ ಜಾರಿಗೆ ತರಲು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಉನ್ನತ ಮಟ್ಟದ ಸಭೆ ನಡೆಸಲಾಗುವುದು. ಕೈಗಾರಿಕೆಗಳ ಅಭಿವೃದ್ಧಿಯೊಂದಿಗೆ ಪರಿಸರ ಸಂರಕ್ಷಣೆಗೂ ಒತ್ತು ನೀಡಲಾಗುವುದು ಎಂದು ಸಚಿವರು ಹೇಳಿದರು.
ಬೈಕಂಪಾಡಿ ಕೈಗಾರಿಕಾ ಪ್ರದೇಶದ ಕಾರ್ಮಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಇಲ್ಲಿ ಇಂದಿರಾ ಕ್ಯಾಂಟೀನ್ ಸ್ಥಾಪಿಸುವ ಬಗ್ಗೆ ಪರಿಶೀಲಿಸಲಾಗುವುದು ಎಂದು ಸಚಿವ ಯು.ಟಿ. ಖಾದರ್ ತಿಳಿಸಿದರು.
ಇದಕ್ಕೂ ಮೊದಲು ಕೆನರಾ ಸಣ್ಣ ಕೈಗಾರಿಕಾ ಸಂಘದಿಂದ ಬೈಕಂಪಾಡಿ ಕೈಗಾರಿಕಾ ಟೌನ್ಶಿಪ್ ಪ್ರಾಧಿಕಾರ ಸ್ಥಾಪನೆ ಸೇರಿದಂತೆ ವಿವಿಧ ಬೇಡಿಕೆಗಳ ಬಗ್ಗೆ ಸಚಿವರಿಗೆ ಮನವಿ ಸಲ್ಲಿಸಲಾಯಿತು. ಸ್ಥಳೀಯ ಕಾರ್ಪೋರೇಟರ್ ಪುರುಷೋತ್ತಮ ಚಿತ್ರಾಪುರ, ಕೆನರಾ ಸಣ್ಣ ಕೈಗಾರಿಕಾ ಸಂಘದ ಗೌರವ್ ಹೆಗ್ಡೆ ಮತ್ತಿತರರು ಉಪಸ್ಥಿತರಿದ್ದರು.