ಬೆಳ್ತಂಗಡಿ, ಆ 02: ಹೆಚ್ ಪಿಸಿಎಲ್ ಗ್ಯಾಸ್ ಪೈಪ್ ಲೈನ್ನಲ್ಲಿ ಸ್ಟೇಷನ್ ಸರ್ವಿಸ್ ಗಾರ್ಡಗಳಾಗಿರುವವರನ್ನು ಯಾವುದೇ ಸೂಚನೆಗಳನ್ನು ನೀಡದೆ ಏಕಾಏಕಿ ಕೆಲಸದಿಂದ ತೆಗೆದು ಹಾಕಿರುವುದನ್ನು ವಿರೋಧಿಸಿ ಬುಧವಾರ ಹೆಚ್ ಪಿ.ಸಿಎಲ್ ಗ್ಯಾಸ್ ಪೈಪ್ ಲೈನ್ ಹಾದು ಹೋಗುವ ಮಂಗಳೂರು, ಬಂಟ್ವಾಳ ಹಾಗೂ ಬೆಳ್ತಂಗಡಿ ತಾಲೂಕಿನ ವಿವಿಧ ಕೇಂದ್ರಗಳಲ್ಲಿ ಪ್ರತಿಭಟನೆ ನಡೆಸಿದರು.
ಕಳೆದ ಮೂರು ವರ್ಷಗಳಿಂದ 38 ಮಂದಿ ಕಂಪೆನಿಯಲ್ಲಿ ಗಾರ್ಡ್ಗಳಾಗಿ ಕೆಲಸ ಮಾಡುತ್ತಿದ್ದಾರೆ. ಕಂಪೆನಿಯವರು ಪೈಪ್ ಲೈನ್ ಅಳವಡಿಸಲು ಗ್ರಾಮೀಣ ಪ್ರದೇಶಗಳಲ್ಲಿ ಕೃಷಿಕರಿಂದ ಜಮೀನನ್ನು ಪಡದುಕೊಂಡಾಗ ಸಂತ್ರಸ್ಥರಾಗುವವರಿಗೆ ಹಾಗೂ ಗ್ರಾಮದ ಜನರಿಗೆ ಉದ್ಯೋಗ ನೀಡುವ ಭರವಸೆಯನ್ನು ನೀಡಲಾಗಿತ್ತು ಅದರಂತೆ ಗ್ರಾಮಗಳಲ್ಲಿನ ಯುವಕರಿಗೆ ಆಯಾ ಸ್ಥಳಗಳಲ್ಲಿ ಸೆಕ್ಯೂರಿಟಿ ಗಾರ್ಡ್ಗಳಾಗಿ ಕೆಲಸವನ್ನೂ ನೀಡಲಾಗಿತ್ತು. ಇವರು ಕಳೆದ ಮೂರು ವರ್ಷಗಳಿಂದ ಇವರು ಸಿಐಎಸ್ಎಸ್ ಕಂಪೆನಿಯಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದರು. ಸ್ಥಳೀಯ ಜನರಿಗೆ ಕಂಪೆನಿಯವರು ಉದ್ಯೋಗ ಭದ್ರತೆಯನ್ನು ನೀಡಿದ್ದರು. ಆದರೆ ಇದೀಗ ಹೆಚ್ಪಿಸಿಎಲ್ ಕಂಪೆನಿಯವರು ಕೇಂದ್ರ ಸರಕಾರದ ಕಾನೂನಿನಂತೆ ಏಕಾಏಕಿಯಾಗಿ ಭದ್ರತಾ ಸಿಬ್ಬಂದಿಗಳ ಗುತ್ತಿಗೆಯನ್ನು ಬದಲಿಸಿರುವುದಾಗಿ ತಿಳಿಸಿದ್ದು ಆಗಸ್ಟ್ ಒಂದರಿಂದ ಹೊಸ ಕಂಪೆನಿಯವರು ಗುತ್ತಿಗೆ ಕಾರ್ಮಿಕರನ್ನು ನೇಮಿಸುವುದಾಗಿ ತಿಳಿಸಿದೆ. ಸ್ಥಳೀಯರಾಗಿ ನೇಮಕಗೊಂಡಿದ್ದ ಈ ಕಾರ್ಮಿಕರು ಕೆಲಸ ಕಳೆದುಕೊಳ್ಳಬೇಕಾಗಿ ಬರುತ್ತಿದೆ.
ಕಂಪೆನಿಯವರು ಕೆಲಸ ನಿರಾಕರಿಸಿರುವ ಹಿನ್ನಲೆಯಲ್ಲಿ ಬುಧವಾರ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವ ಭದ್ರತಾ ಸಿಬ್ಬಂದಿಗಳು ತಮ್ಮ ತಮ್ಮ ಕೇಂದ್ರದ ಎದುರು ಸ್ಥಳೀಯ ನಾಗರಿಕರ ಸಹಕಾರದೊಂದಿಗೆ ಪ್ರತಿಭಟನೆಯನ್ನು ಹಮ್ಮಿಕೊಂಡರು. ಹೊಸದಾಗಿ ಗುತ್ತಿಗೆ ಪಡೆದುಕೊಂಡ ಕಂಪೆನಿಯವರು ತಮ್ಮದೇ ಸಿಬ್ಬಂದಿಗಳನ್ನು ನೇಮಕ ಮಾಡಲು ಮುಂದಾಗುತ್ತಿದ್ದು ಸ್ಥಳೀಯರಿಗೆ ಅವಕಾಶ ನೀಡಲು ನಿರಾಕರಿಸುತ್ತಿದ್ದಾರೆ ಎಂದು ಆರೋಪಿಸಿರುವ ಕಾರ್ಮಿಕರು ಇಂದು ಹೊಸ ಕಂಪೆನಿಗೆ ಸೇರಿದ ಕಾರ್ಮಿಕರು ಕೆಲಸಕ್ಕೆ ಸೇರಲು ಆಗಮಿಸಿದಾಗ ಅವರನ್ನು ಆಯಾ ಕೇಂದ್ರಗಳಲ್ಲಿ ಕಂಪೆನಿಯ ಗೇಟಿನ ಸಮೀಪವೇ ಸ್ಥಳೀಯ ಜನರ ಸಹಬಾಗಿತ್ವದೊಂದಿಗೆ ತಡೆದು ಪ್ರತಿಭಟಿಸಿದರು. ಹೊಸದಾಗಿ ಬಂದ ಹೊರಗಿನ ಭದ್ರತಾ ಸಿಬ್ಬಂದಿಗಳನ್ನು ಕೆಲಸಕ್ಕೆ ಪ್ರವೇಶಿಸಲು ಅವಕಾಶ ನೀಡಲೇ ಇಲ್ಲ.
ಬೆಳ್ತಂಗಡಿ ತಾಲೂಕಿನ ಕಳಿಯ, ಕೊಯ್ಯೂರು, ನೆರಿಯ ಸೇರಿದಂತೆ ಜಿಲ್ಲೆಯ ಮಂಗಳೂರು ಹಾಗೂ ಬಂಟ್ವಾಳ ತಾಲೂಕಿನ ಕೇಂದ್ರಗಳಲ್ಲಿ ಸುಮಾರು ೩೮ ಮಂದಿ ಕಾರ್ಮಿಕರು ಭದ್ರತಾ ಸಿಬ್ಬಂದಿಗಳಾಗಿ ಕೆಲಸ ಮಾಡುತ್ತಿದ್ದು ಜಿಲ್ಲೆಯ ಎಲ್ಲಾ ಕೇಂದ್ರಗಳಲ್ಲಿಯೂ ಇದೇ ರೀತಿ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು. ಕೆಲಸ ಕಳೆದುಕೊಳ್ಳಲಿರುವ ಕಾರ್ಮಿಕರು ಇದೀಗ ಶಾಸಕರು, ಸಂಸದರಿಗೆ ಗ್ರಾಮ ಪಂಚಾಯತಿಗೆ ಹಾಗೂ ಕಾರ್ಮಿಕ ಇಲಾಖೆಗೆ ಮನವಿಯನ್ನು ಸಲ್ಲಿಸಲಾಗಿದ್ದು ತಮ್ಮನ್ನು ಕೆಲಸದಲ್ಲಿ ಮುಂದುವರಿಸುವಂತೆ ಮನವಿ ಮಾಡಿದ್ದಾರೆ.
ಶಾಸಕರ ಭೇಟಿ: ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಅವರು ಕಾರ್ಮಿಕರು ಪ್ರತಿಭಟನೆ ನಡೆಸುತ್ತಿದ್ದ ಸ್ಥಳಕ್ಕೆ ಭೇಟಿ ನೀಡಿ ಕಾರ್ಮಿಕರೊಂದಿಗೆ ಮಾತುಕತೆ ನಡೆಸಿದರು.ಉದ್ಯೋಗ ಕಳೆದುಕೊಳ್ಳದಂತೆ ಸರಕಾರದೊಂದಿಗೆ, ಹಾಗೂ ಕಂಪೆನಿಯವರೊಂದಿಗೆ ಮಾತುಕತೆ ನಡೆಸುತ್ತೇನೆ. ದೆಹಲಿಯಲ್ಲಿ ಕೇಂದ್ರ ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್ ಅವರೊಂದಿಗೂ ಮಾತುಕತೆ ನಡೆಸಿ ಸಮಸ್ಯೆ ಪರಿಹಾರಕ್ಕೆ ಕ್ರಮ ಕೈಗೊಳ್ಳಲಾಗುವುದು. ಯಾವುದೇ ಕಾರಣಕ್ಕೂ ಗ್ರಾಮೀಣ ಜನರಿಗೆ ಅನ್ಯಾಯವಾಗಲು ಬಿಡುವುದಿಲ್ಲ, ಈ ಕಾರ್ಮಿಕರೊಂದಿಗೆ ನ್ಯಾಯಕ್ಕಾಗಿಯಾವ ಹೋರಾಟಕ್ಕೂ ಸಿದ್ದನಿರುವುದಾಗಿ ತಿಳಿಸಿದರು.
ಸ್ಥಳೀಯರಿಗೆ ಉದ್ಯೋಗಾವಕಾಶ ನೀಡುವುದಾಗಿ ಭರವಸೆ ನೀಡಿ ಜಿಲ್ಲೆಗೆ ಆಗಮಿಸಿದ ಕಂಪೆನಿಯವರು ಕೊನೆಗೂ ಭದ್ರತಾ ಸಿಬ್ಬಂದಿಗಳ ಹಾಗೂ ಇತರೆ ಸಣ್ಣ ಕೆಲಸಗಳನ್ನು ನೀಡಿತ್ತು. ಆದರೆಇದೀಗ ಮೂರು ವರ್ಷ ಕಾಲ ಕೆಲಸ ಮಾಡಿದವರನ್ನು ಏಕಾ ಏಕಿ ಕೆಲಸದಿಂದ ತೆಗೆದು ಹಾಕಲಾಗಿದ್ದು ಈ ಕಾರ್ಮಿಕರು ಏನು ಮಾಡಬೇಕು ಎಂದು ತಿಳಿಯದೆ ಕಂಗಾಲಾಗಿದ್ದಾರೆ. ಈ ಉದ್ಯೋಗವನ್ನು ನಂಬಿಕೊಂಡು ಇವರು ಬ್ಯಾಂಕ್ ಸಾಲ ಹಾಗೂ ಇನ್ನಿತರ ಕಾರ್ಯಗಳನ್ನು ಮಾಡಿದ್ದು ಕೆಲಸ ಕಳೆದುಕೊಂಡರೆ ನಾವು ಬೀದಿ ಪಾಲಾಗಲಿದ್ದೇವೆ.ಯೋಜನೆಗಾಗಿ ಜಮೀನನನ್ನು ಕಳೆದುಕೊಂಡ ನಮಗೆ ಅನುಕಂಪದ ಆಧಾರದ ಮೇಲೆ ಕೆಲಸ ನೀಡಲಾಗಿತ್ತು ಕೂಡಲೇ ಕೇಂದ್ರ ಸರಕಾರ ಕಂಪೆನಿಯವರು ಈ ಬಗ್ಗೆ ಗಮನ ಹರಿಸಿ ನಮ್ಮನ್ನು ಕೆಲಸದಲ್ಲಿ ಮುಂದುವರಿಸಲು ಕ್ರಮ ಕೈಗೊಳ್ಳಬೇಕು ಕೆಲಸ ಸಿಗುವ ವರೆಗೂ ನಮ್ಮ ಹೋರಾಟ ನಿರಂತರವಾಗಿ ಮುಂದುವರಿಯಲಿದೆ ಎನ್ನುತ್ತಾರೆ ಕೊಯ್ಯೂರಿನ ಸಂತ್ರಸ್ಥ ಕಾರ್ಮಿಕ ಜಗದೀಶ್.