ಬೆಳ್ತಂಗಡಿ, ಆ 02: ಶಿರಾಡಿ ಘಾಟ್ ರಸ್ತೆ ಕಾಮಗಾರಿ ಬಹುತೇಕ ಮುಕ್ತಾಯಗೊಂಡಿರುವುದರಿಂದ ಶಿರಾಡಿಘಾಟ್ ರಸ್ತೆಯಲ್ಲಿ ಭಾರೀ ವಾಹನಗಳ ಸಂಚಾರಕ್ಕೆ ನಿಷೇಧ ವಿಧಿಸಿ ಹೊರಡಿಸಿರುವ ಆದೇಶವನ್ನು ಹಿಂದಕ್ಕೆ ಪಡೆಯಲಾಗಿದೆ. ಆಗಸ್ಟ್ 2 ರಿಂದ ಶಿರಾಡಿ ಘಾಟ್ನಲ್ಲಿ ಭಾರೀ ವಾಹನಗಳು ಸೇರಿದಂತೆ ಎಲ್ಲಾ ವಾಹನಗಳಿಗೂ ಮುಕ್ತ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಎಸ್. ಸಸಿಕಾಂತ್ ಸೆಂಥಿಲ್ ಆದೇಶದಲ್ಲಿ ತಿಳಿಸಿದ್ದಾರೆ. ಕಾಂಕ್ರೀಟ್ ರಸ್ತೆ ಕಾಮಗಾರಿ ಬಳಿಕ ಶಿರಾಡಿ ಘಾಟ್ ಮಾರ್ಗ ವಾಹನಗಳಿಗೆ ಮುಕ್ತವಾಗಿತ್ತು. ಆದರೆ ಇದು ಲಘು ವಾಹನಗಳ ಸಂಚಾರಕ್ಕೆ ಮಾತ್ರ ಸೀಮಿತವಾಗಿತ್ತು. ಶಿರಾಡಿ ಘಾಟ್ 2 ನೇ ಹಂತದ ರಸ್ತೆ ಸುಧಾರಣೆ ಪೂರ್ಣಗೊಂಡ ಬಳಿಕವೂ ಘನ ವಾಹನಗಳಿಗೆ ಮುಂದುವರಿಸಲಾಗಿದ್ದ ನಿರ್ಬಂಧ ಹಿಂದಕ್ಕೆ ಇದೀಗ ಹಿಂದಕ್ಕೆ ಪಡೆದಿದೆ.
ಶಿರಾಡಿ 2 ನೇ ಹಂತದ ಕಾಮಗಾರಿ ಪೂರ್ಣಗೊಂಡು ಜುಲೈ 15 ರಂದು ವಾಹನ ಸಂಚಾರಕ್ಕೆ ಮುಕ್ತಗೊಳಿಸಲಾಗಿತ್ತು. ಆದರೆ ಅಂತಿಮ ಹಂತದ ಕೆಲಸ ಬಾಕಿ ಉಳಿದ ಕಾರಣ ಘನ ವಾಹನ ಓಡಾಟಕ್ಕೆ ಬಿಟ್ಟರೆ ಅಡ್ಡಿಯಾಗುತ್ತದೆ ಎನ್ನುವ ಕಾರಣಕ್ಕಾಗಿ ನಿರ್ಬಂಧ ಹೇರಲಾಗಿತ್ತು.