Karavali
ಬಂಟ್ವಾಳ: ಪುರಸಭೆ ಆಡಳಿತಾವಧಿಯ ಕೊನೆಯ ಸಾಮಾನ್ಯ ಸಭೆ ಆರೋಪ, ಗದ್ದಲಗಳಲ್ಲೇ ಅಂತ್ಯವಾಯಿತು.!
- Fri, Aug 03 2018 09:41:54 AM
-
ಬಂಟ್ವಾಳ, ಆ 03: ಟ್ರಾಫಿಕ್, ತ್ಯಾಜ್ಯ ವಿಲೇವಾರಿ, ಪಾರ್ಕ್ ನಿರ್ವಹಣೆ, ಲೆಕ್ಕಪತ್ರಗಳ ಗೊಂದಲ, ಪಾರ್ಕಿಂಗ್ ಅವ್ಯವಸ್ಥೆಗಳು ಸಹಿತ ವಿವಿಧ ಸಮಸ್ಯೆಗಳ ಕುರಿತ ಆರೋಪ, ಪ್ರತ್ಯಾರೋಪ, ದೂಷಣೆಗಳು, ಗದ್ದಲದ ನಡುವೆ ಬಂಟ್ವಾಳ ಪುರಸಭೆಯ ಐದು ವರ್ಷದ ಆಡಳಿತಾವಧಿಯ ಕೊನೆಯ ಸಾಮಾನ್ಯ ಸಭೆ ಗುರುವಾರ ಅಂತ್ಯವಾಯಿತು. ಸಭೆ ಆರಂಭವಾಗಿ ಆರ್ದ ಮುಗಿಯುತ್ತಿದ್ದಂತೆ ಪುರಸಭೆ ಚುನಾವಣೆ ಘೋಷಣೆ ಪ್ರಕಟಗೊಂಡಿರುವ. ಸುದ್ದಿಯು ತಲುಪಿತು. ಬಳಿಕ ವಿವಿಧ ವಿಷಯಗಳ ಬಗ್ಗೆ ಕೇವಲ ಚರ್ಚೆ ನಡೆದಿದ್ದು ಬಿಟ್ಟರೆ,ಯಾವುದೇ ತೀರ್ಮಾನಕ್ಕೆ ಬರಲು ಸಾಧ್ಯವಾಗಲಿಲ್ಲ,ಕೊನೆಯ ಸಭೆ ಗೌಜಿ,ಗದ್ದಲದಲ್ಲೆ ಮುಕ್ತಾಯವಾಯಿತು.
ಅಧ್ಯಕ್ಷ ಪಿ.ರಾಮಕೃಷ್ಣ ಆಳ್ವ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಭಾಗವಹಿಸಿದ್ದ ಟ್ರಾಫಿಕ್ ಎಸ್.ಐ. ಯಲ್ಲಪ್ಪ ಅವರೆದುರು ಪಾರ್ಕಿಂಗ್ ಸಮಸ್ಯೆಯ ಕುರಿತು ಸದಸ್ಯರು ಕಳವಳ ವ್ಯಕ್ತಪಡಿಸಿದರು. ಈ ಸಂದರ್ಭ ಎಸ್.ಐ. ಮಾತನಾಡಿ, ಪುರಸಭೆ ವತಿಯಿಂದ ನೋ ಪಾರ್ಕಿಂಗ್ ಅನ್ನು ಕಟ್ಟುನಿಟ್ಟಾಗಿ ಅಳವಡಿಸಬೇಕಾದ ಕುರಿತು ವಿವರಿಸಿದರು. ವಾಹನ ಅಪಘಾತಕ್ಕೆ ಸಂಬಂಧಿಸಿ ಜುಲೈ ತಿಂಗಳಲ್ಲಿ ಬಂಟ್ವಾಳ ಟ್ರಾಫಿಕ್ ಠಾಣಾ ವ್ಯಾಪ್ತಿಯಲ್ಲಿ ೧೨ ಪ್ರಕರಣಗಳು ನಡೆದಿವೆ ಹೀಗಾಗಿ ಸುರಕ್ಷಿತ ಚಾಲನೆ ಕುರಿತು ಎಚ್ಚರ ಮೂಡಿಸುವ ಸಲುವಾಗಿ ತಪಾಸಣೆ ನಡೆಸುತ್ತೇವೆ ಎಂದು ಸಮಾಜಾಯಿಷಿ ನೀಡಿದ ಅವರು. ಬಿ.ಸಿ.ರೋಡ್, ಬಡ್ಡಕಟ್ಟೆಯಲ್ಲಿ ಪಾರ್ಕಿಂಗ್ ಗೆ ಸೂಕ್ತ ಜಾಗ ಗುರುತಿಸುವ ಅಗತ್ಯವಿದೆ ಎಂದರು.
ಟೋಲ್ ಗೇಟ್ ಸರ್ವೀಸ್ ರಸ್ತೆಯಲ್ಲಿ ಗುತ್ತಿಗೆದಾರನೊಂದಿಗೆ ಪೊಲೀಸ್ ಸಿಬ್ಬಂದಿಯನ್ನು ಬಳಸಿ ಸುಂಕ ವಸೂಲು ಮಾಡುವ ಬಗ್ಗೆ ಸದಸ್ಯ ದೇವದಾಸ ಶೆಟ್ಟಿ ಅಸಮಾಧಾನ ವ್ಯಕ್ತಪಡಿಸಿದರಲ್ಲದೆ ಬಿ.ಸಿ.ರೋಡಿನ ರಸ್ತೆ ಸಮಸ್ಯೆ ಕುರಿತು ಹೆದ್ದಾರಿ ಪ್ರಾಧಿಕಾರಕ್ಕೆ ಈಗಾಗಲೇ ದೂರು ಸಲ್ಲಿಸಲಾಗಿದೆ ಎಂದು ಗಮನ ಸೆಳೆದರು. ಸದಸ್ಯರಾದ ಜಗದೀಶ ಕುಂದರ್, ಸದಾಶಿವ ಬಂಗೇರ, ಮಹಮ್ಮದ್ ಶರೀಫ್ ಮೊದಲಾದವರು ಟ್ರಾಫಿಕ್ ಸಮಸ್ಯೆಗಳ ಗಮನ ಸೆಳೆದರು.ಒಂದು ಹಂತದಲ್ಲಿ ರಾಂಗ್ ಸೈಡ್ ನಲ್ಲಿ ವಾಹನ ಚಲಾಯಿಸಿ ನಿಯಮ ಉಲ್ಲಂಘಿಸುವವರ ಬಗ್ಗೆ ಮೃಧು ಧೋರಣೆ ತಳೆದಿರುವ ಕುರಿತು ಸದಸ್ಯ ಶರೀಫ್ ಅವರು ಎಸ್ ಐ ಅವರನ್ನು ತರಾಟೆಗೂ ತೆಗೆದು ಕೊಂಡರು. ಈ ಸಂದರ್ಭ ಮಾತನಾಡಿದ ಮುಖ್ಯಾಧಿಕಾರಿ ರೇಖಾ ಜೆ. ಶೆಟ್ಟಿ, ಬಿ.ಸಿ.ರೋಡ್ ನಲ್ಲಿ ಎಲ್ಲಿ ಪಾರ್ಕಿಂಗ್ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಪೊಲೀಸ್ ಮತ್ತು ಪುರಸಭೆ ಜಂಟಿ ಸರ್ವೆಯನ್ನು ನಡೆಸಲಾಗುವುದು ಎಂದರು.
ಶುದ್ಧ ಕುಡಿಯುವ ನೀರನ್ನು ದಿನದ ಇಪ್ಪತ್ತನಾಲ್ಕು ತಾಸು ಒದಗಿಸುವ ಯೋಜನೆ ವಿಫಲಗೊಂಡಿದೆ ಎಂದು ಆರೋಪಿಸಿದ ಸದಸ್ಯ ಗೋವಿಂದ ಪ್ರಭು, ನದಿಯ ನೀರು ಮಾರ್ಗಕ್ಕಾ, ಜನರಿಗಾ ಎಂಬಂತಾಗಿದೆ. ಸುಮಾರು ಕಡೆಗಳಲ್ಲಿ ಪೈಪುಗಳು ಲೀಕೇಜ್ ಆಗುತ್ತಿದ್ದು, ಸರಬರಾಜು ವ್ಯವಸ್ಥೆ ಸರಿ ಇಲ್ಲ ಎಂದು ಗಮನ ಸೆಳೆದರು. ಇದಕ್ಕೆ ಹಲವು ಸದಸ್ಯರು ಧ್ವನಿಗೂಡಿಸಿ ಈ ಕುರಿತು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು. ಎರಡನೇ ಹಂತದ ಕುಡಿಯುವ ನೀರಿನ ಯೋಜನೆ ಇನ್ನು ಪುರಸಭೆಗೆ ಹಸ್ತಾಂತರವಾಗಿಲ್ಲ ಎಂದು ಇಂಜಿನಿಯರ್ ಡೊಮೆನಿಕ್ ಡಿಮೆಲ್ಲೋ ತಿಳಿಸಿದರು.
56 ಲಕ್ಷ ರೂ ಎಲ್ಲಿಗೆ ಹೋಯಿತು?
ಪುರಸಭೆಯಲ್ಲಿ ಲೆಕ್ಕಪತ್ರ ವಿಚಾರದಲ್ಲಿ ಲೆಕ್ಕಾಧಿಕಾರಿಯನ್ನು ವಜಾ ಮಾಡಲಾಗಿದೆ. ಆದರೆ ೫೬ ಲಕ್ಷ ರೂ ಎಲ್ಲಿಗೆ ಹೋಯಿತು ಎಂಬ ಉತ್ತರ ಇನ್ನು ಸಿಕ್ಕಿಲ್ಲ ಎಂದು ಸದಸ್ಯರಾದ ದೇವದಾಸ ಶೆಟ್ಟಿ ಮತ್ತು ಗೋವಿಂದ ಪ್ರಭು ಗಮನಸೆಳೆದರು. ಈ ಬಗ್ಗೆ ದೂರು ನೀಡಿದಾಗ ಯಾರ ಹೆಸರನ್ನು ಉಲ್ಲೇಖಿಸಿ ದೂರು ನೀಡಿಲ್ಲ ಎಂದು ಸ್ಪಷ್ಟ ಪಡಿಸಿದ ದೇವದಾಸ ಶೆಟ್ಟಿ ಅವರು ಕೆಲವೆಡೆ ತನ್ನ ಹೆಸರನ್ನು ಪ್ರಸ್ತಾಪಿಸಿದಕ್ಕೆ ಅಸಮಾಧಾನ ವ್ಯಕ್ತಪಡಿಸಿದರು. ತಪ್ಪು ಮಾಡಿದವರಿಗೆ ಶಿಕ್ಷೆ ಆಗುತ್ತದೆ ಎಂದು ಬುಡಾ ಅಧ್ಯಕ್ಷ ಸದಾಶಿವ ಬಂಗೇರ ಹೇಳಿದರೆ, ಯಾರ ಹಸ್ತಕ್ಷೇಪ ಲೆಕ್ಕಪತ್ರವಿಚಾರದಲ್ಲಿ ಆಗಿದೆ ಉತ್ತರ ಕೊಡಿ ಎಂದು ಗೋವಿಂದಪ್ರಭು ಪಟ್ಟುಹಿಡಿದರು.ಹಾಗೆಯೇ ಸುಶ್ಮಾ ಅವರಿಗೆ ನೋಟಿಸ್ ನೀಡದೆ ವಜಾಗೊಳಿಸಿರುವ ಕ್ರಮಕ್ಕೆ ಅಕ್ಷೇಪಿಸಿದ ದೇವದಾಸ ಶೆಟ್ಟಿ, ಅವರು ನೀಡಿದ ಪತ್ರದಲ್ಲಿ ಎಚ್ ಡಿ ಎಫ್ ಸಿ ಬ್ಯಾಂಕಿನಲ್ಲಾಗುವ ವ್ಯವಹಾರದ ಬಗ್ಗೆ ಉಲ್ಲೇಖಿಸಿದ್ದು,ಪತ್ಯ ಅಗಲಿಲ್ಲವೇಎಂದು ಪ್ರಶ್ನಿಸಿದರು. ಸುಶ್ಮಾ ಅವರು ಹೇಗೆ ಇದಕ್ಕೆ ಹೊಣೆಯೋ ಹಾಗೆಯೇ ಮುಖ್ಯಾಧಿಕಾರಿಯವರು ಕೂಡ ಈ ಪ್ರಕರಣದಲ್ಲಿ ಹೊಣೆಗಾರರು ಎಂದು ಪ್ರತಿಪಾದಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯಾಧಿಕಾರಿಯವರು ಲೆಕ್ಕದಲ್ಲಾದ ವ್ಯತ್ಯಾಸದ ಬಗ್ಗೆ ವಿವರಣೆ ನೀಡುವಂತೆ ಅವರಿಗೆ ಮೌಖಿಕ,ಲಿಖಿತವಾಗಿ ತಿಳಿಸಲಾಗಿತ್ತು.ಜಿಲ್ಲಾಧಿಕಾರಿಯವರ ಸೂಚನೆಯಂತೆ ಕ್ರಮಕೈಗೊಳ್ಳಲಾಗಿದೆ ಎಂದರು.
ಬಸ್ ನಿಲ್ದಾಣದ ಜಾಹೀರಾತು ಫಲಕಗಳು ಅತಿ ಕಡಿಮೆ ದರದಲ್ಲಿ ಕೊಡಲಾಗಿರುವ ವಿಚಾರ, ತ್ಯಾಜ್ಯ ಸಂಗ್ರಹಣೆಯ ಟಿಪ್ಪರ್ ದುರಸ್ತಿಗಳ ಬಿಲ್ ಪಾವತಿ, ಬಿ.ಸಿ.ರೋಡ್ ಪಾರ್ಕ್ನ ನಿರ್ವಹಣೆ ವಿಚಾರಗಳು ಸಭೆಯಲ್ಲಿ ಚರ್ಚೆಗೆ ಬಂದವು. ಉಪಾಧ್ಯಕ್ಷ ಮಹಮ್ಮದ್ ನಂದರಬೆಟ್ಟು, ಸ್ಥಾಯಿ ಸಮಿತಿ ಅಧ್ಯಕ್ಷ ವಾಸು ಪೂಜಾರಿ, ಬುಡಾ ಅಧ್ಯಕ್ಷ ಸದಾಶಿವ ಬಂಗೇರ, ಸದಸ್ಯರಾದ ಮಹಮ್ಮದ್ ಇಕ್ಬಾಲ್, ಮೊನೀಶ್ ಆಲಿ, ಸುಗುಣ ಕಿಣಿ, ಬಿ.ಮೋಹನ್, ಬಿ.ಪ್ರವೀಣ್, ಗಂಗಾಧರ್, ಮಹಮ್ಮದ್ ಶರೀಫ್, ವಸಂತಿ ಚಂದಪ್ಪ, ಚಂಚಲಾಕ್ಷಿ, ಭಾಸ್ಕರ ಟೈಲರ್, ಜಗದೀಶ ಕುಂದರ್ ವಿವಿಧ ವಿಷಯಗಳ ಕುರಿತು ಮಾತನಾಡಿದರು.
ಟಿ.ಸಿ.ಪಾಯಿಂಟ್ ಕೆಡಹಿದ್ದು ಯಾರು?
ಬಿ.ಸಿ.ರೋಡ್ ಬಸ್ ನಿಲ್ದಾಣದಲ್ಲಿದ್ದ ಕೆಎಸ್ಸಾರ್ಟಿಸಿ ಟಿಕೆಟ್ ಕೌಂಟರ್ ಕೊಠಡಿಯನ್ನು ರಾತ್ರೋರಾತ್ರಿ ಸಾರ್ವಜನಿಕರು ಸೇರಿ ಭಾಗಶಃ ಕೆಡವಿದ್ದಾರೆ. ಉಳಿದಂತೆ ಸಂಪೂರ್ಣ ತೆರವಿಗೆ ಸಭೆ ತೀರ್ಮಾನಿಸಿದ ಸಂದರ್ಭ ಆಕ್ಷೇಪಿಸಿದ ದೇವದಾಸ ಶೆಟ್ಟಿ, ಅದನ್ನು ಯಾರು ಕೆಡಹಿದ್ದಾರೆ ಎಂಬ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು. ಎರಡು ವರ್ಷದ ಹಿಂದೆ ಈ ಕೌಂಟರ್ ನಿಂದಾಗುವ ತೊಂದರೆಯ ಬಗ್ಗೆ ಅಧ್ಯಕ್ಷರಿಗೆ ಮೌಖಿಕವಾಗಿ ತಿಳಿಸಿ ಅದರ ತೆರವಿಗೆ ಮನವಿ ಮಾಡಿದ್ದೆ ಎಂದು ಸದಸ್ಯ ಬಿ.ಮೋಹನ್ ಸಭೆಯ ಗಮನಸೆಳೆದರು. ಈ ವೇಳೆ ಬುಡಾ ಅಧ್ಯಕ್ಷ ಸದಾಶಿವ ಬಂಗೇರ, ದೇವದಾಸ ಶೆಟ್ಟಿ ಮತ್ತು ಗೋವಿಂದ ಪ್ರಭು ಮಧ್ಯೆ ಏರಿದ ಧ್ವನಿಯಲ್ಲಿ ವಾಗ್ವಾದವೇ ನಡೆಯಿತು. ಅಸಂವಿಧಾನಿಕಪದಗಳು ಬಳಕೆಯಾದವು, ಕೊನೆಗೆ ಯಾವುದೇ ತೀರ್ಮಾನವಿಲ್ಲದೆ ಗದ್ದಲದ ನಡುವೆ ಈ ಪ್ರಕರಣ ಅಲ್ಲಿಗೆ ಮುಕ್ತಾಯಗೊಂಡಿತು.
ಪುರಸಭೆ ಮೀಸಲಾತಿಯದ್ದೇ ಚಿಂತೆ
ಒಂದೆಡೆ ಪುರಸಭೆ ಮೀಟಿಂಗ್ ನಲ್ಲಿ ಭಾರಿ ಚರ್ಚೆಗಳು ನಡೆಯುತ್ತಿದ್ದರೆ, ಇನ್ನೊಂದೆಡೆ ಮೀಸಲಾತಿ ಪಟ್ಟಿಯನ್ನು ಸದಸ್ಯರು ಆಸಕ್ತಿಯಿಂದ ವೀಕ್ಷಿಸುತ್ತಿದ್ದರು. ತಮ್ಮ ವಾರ್ಡಿನಲ್ಲಿ ಈ ಬಾರಿ ತಮಗೆ ಸ್ಪರ್ಧೆಗೆ ಚಾನ್ಸ್ ಇದೆಯೋ ,ಇಲ್ಲವೋ ಎಂಬ ಕುರಿತು ಚರ್ಚೆಯಲ್ಲಿ ತಲ್ಲಿನರಾಗಿದ್ದರು. ಕೊನೆಯ ಸಭೆಯಾದ ಕಾರಣ ಸದಸ್ಯರ ಹಾಜರಾತಿ ಪೂರ್ಣ ಇದ್ದರೂ ವಿಶೇಷ ನಿರ್ಣಯಗಳ ಕುರಿತು ಗಂಭೀರ ಆಸಕ್ತಿ ಹೊಂದಿದಂತೆ ಕಾಣಲಿಲ್ಲ.