ಕುಂದಾಪುರ, ಆ 3: ಮನೆಯಲ್ಲಿ ಮೊಬೈಲ್ ಕೊಡಿಸಿಲ್ಲ ಎನ್ನುವ ಕಾರಣಕ್ಕೆ ಬೇಸರಗೊಂಡ ವಿದ್ಯಾರ್ಥಿಯೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಕೋಟ ಪೊಲೀಸ್ ಠಾಣಾ ವ್ಯಾಪ್ತಿಯ ಕಕ್ಕುಂಜೆ ಎಂಬಲ್ಲಿ ಶುಕ್ರವಾರ ಮಧ್ಯಾಹ್ನ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿಯನ್ನು ಕಕ್ಕುಂಜೆಯ ನಿವಾಸಿ ಬಸವ ಕುಲಾಲ್ ಎಂಬುವರ ಪುತ್ರ ಬಿದ್ಕಲ್ ಕಟ್ಟೆ ಪದವಿ ಪೂರ್ವ ಕಾಲೇಜಿನ ಪ್ರಥಮ ವಾಣಿಜ್ಯ ವಿಭಾಗದ ವಿದ್ಯಾರ್ಥಿ ಪ್ರತೀಕ್ಷ್(16) ಎಂದು ಗುರುತಿಸಲಾಗಿದೆ.
ಬಡ ಕುಟುಂಬದ ವಿದ್ಯಾರ್ಥಿಗೆ ಕಾಲೇಜಿನಲ್ಲಿ ಉಳಿದ ವಿದ್ಯಾರ್ಥಿಗಳು ಮೊಬೈಲ್ ತೆಗೆದುಕೊಂಡು ಬರುತ್ತಿದ್ದುದನ್ನು ನೋಡಿ ಮನೆಯಲ್ಲಿ ಮೊಬೈಲ್ ಕೊಡಿಸುವಂತೆ ಹಟ ಮಾಡಿದ್ದ ಎನ್ನಲಾಗಿದೆ. ಆದರೆ ಮನೆಯವರು ಬಡತನದಲ್ಲಿ ಇರುವುದರಿಂದ ಮೊಬೈಲ್ ಕೊಡಿಸಲು ನಿರಾಕರಿಸಿದ್ದರು. ಇದರಿಂದ ವಿದ್ಯಾರ್ಥಿ ಪ್ರತೀಕ್ಷ್ ಮನೆಯವರು ಹೊರಗಡೆ ಹೋಗುವುದನ್ನು ನೋಡಿ ತನ್ನ ಕೊಠಡಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಪ್ರತೀಕ್ಷ ತಂದೆ, ತಾಯಿ ಹಾಗೂ ತಂಗಿಯನ್ನು ಅಗಲಿದ್ದಾನೆ. ಇನ್ನು ಈ ಕುರಿತಂತೆ ಕೋಟ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.