ಕುಂದಾಪುರ, ಆ 4: ಕಳೆದ ಆರು ತಿಂಗಳಿನಿಂದ ಆಗಾಗೆ ಕಾಣಿಸಿಕೊಳ್ಳುತ್ತಿದ್ದ ಚಿರತೆಯೊಂದನ್ನು ಮೂರು ದಿನಗಳ ಸತತ ಕಾರ್ಯಾಚರಣೆಯ ಮೂಲಕ ಕುಂದಾಪುರದ ಅರಣ್ಯಾಧಿಕಾರಿ ಶರತ್ ನೇತೃತ್ವದಲ್ಲಿ ಸೆರೆಹಿಡಿಯಲಾಗಿದೆ. ಕುಂದಾಪುರದ ತೆಕ್ಕಟ್ಟೆ ಸಮೀಪದ ಮಾಲಾಡಿ ನಂದಿಕೇಶ್ವರ ದೇವಸ್ಥಾನದ ಸಮೀಪ ತೋಳಾರ್ ಪ್ಲಾಟ್ನಲ್ಲಿ ಇಡಲಾದ ಬೋನಿಗೆ ಮೂರು ವರ್ಷ ಪ್ರಾಯದ ಗಂಡು ಚಿರತೆ ಸಿಕ್ಕಿ ಹಾಕಿಕೊಂಡಿದೆ.
ಕಳೆದ ಆರು ತಿಂಗಳಿನಿಂದ ಇಲ್ಲಿ ಬೇರೆ ಬೇರೆ ಗಾತ್ರದ ಚಿರತೆಗಳು ಹಲವರಿಗೆ ಕಾಣಿಸಕೊಂಡಿದ್ದವು ಎನ್ನಲಾಗಿದೆ. ಆದರೆ ಇದನ್ನು ಸ್ಥಳೀಯರಿಗೆ ತಿಳಿಸಿದ್ದರೂ ನಂಬಿರಲಿಲ್ಲ ಎನ್ನಲಾಗಿದೆ. ಕೊನೆಗೆ ಗ್ರಾಮಸ್ಥರು ಅರಣ್ಯಾಧಿಕಾರಿಗಳಿಗೆ ದೂರು ನೀಡಿದ್ದರು. ದೂರು ಆಧರಾದಲ್ಲಿ ಅರಣ್ಯಾಧಿಕಾರಿ ಶರತ್ ಮಾರ್ಗದರ್ಶನದಲ್ಲಿ ನಂದಿಕೇಶ್ವರ ದೇವಸ್ಥಾನದ ಸಮೀಪ ಮೇಕೆಯನ್ನು ಬೋನಿನೊಳಗೆ ಕಟ್ಟಿ ಹಾಕಿ ಇಡಲಾಗಿತ್ತು. ಆದರೆ ಬೋನಿಗೆ ಚಿರತೆ ಬಿದ್ದಿರಲಿಲ್ಲ. ಕೊನೆಗೆ ಮೇಕೆಯ ಬದಲಿಗೆ ನಾಯಿಯನ್ನು ಕಟ್ಟಿ ಹಾಕಲಾಯಿತು. ಶುಕ್ರವಾರ ತಡ ರಾತ್ರಿ ಚಿರತೆ ಅಧಿಕಾರಿಗಳು ಇಟ್ಟ ಬೋನಿಗೆ ಸಿಕ್ಕಿ ಹಾಕಿಕೊಂಡಿದೆ. ಶನಿವಾರ ಬೆಳಿಗ್ಗೆ ಕೆಲವರು ಬೋನಿನ ಬಳಿ ಹೋದಾಗ ಚಿರತೆ ಬಿದ್ದಿರುವುದು ಗೊತ್ತಾಗಿದೆ. ಸುದ್ಧಿ ತಿಳಿದ ತಕ್ಷಣ ಸ್ಥಳೀಯರು ಜಮಾಯಿಸಿದ್ದು, ಚಿರತೆ ನೋಡಲು ಕಾತರರಾಗಿದ್ದರು. ನಂತರ ಮೂಕಾಂಬಿಕಾ ಅಭಯಾರಣ್ಯದೊಳಗೆ ಬಿಡಲಾಯಿತು.