ಕಾರ್ಕಳ, ಆ 05 : ತಾಲೂಕು ಸರಕಾರಿ ಆಸ್ಪತ್ರೆಯಲ್ಲಿ ನವಜಾತ ಶಿಶು ನಿಗೂಢ ರೀತಿಯಲ್ಲಿ ಮೃತಪಟ್ಟ ಘಟನೆ ಶನಿವಾರ ಮಧ್ಯಾಹ್ನ ಸಂಭವಿಸಿದೆ. ನಿಟ್ಟೆ ದೂಪದಕಟ್ಟೆ ಮಂಗಳ(28) ಎಂಬವರು ಶುಕ್ರವಾರದಂದು ಚೊಚ್ಚಲ ಹೆರಿಗೆಯಲ್ಲಿ ಜನ್ಮನೀಡಿದ ಹೆಣ್ಣು ಮಗು ಸಾವಿಗೀಡಾದ ದುರ್ದೈವಿ. ನವಜಾತ ಶಿಶುವಿಗೆ ನೀಡಿದ ಚುಚ್ಚು ಮದ್ದು ಸಾವಿಗೆ ಕಾರಣವಾಗಿದೆ ಎಂಬ ಆರೋಪವು ವ್ಯಾಪಕವಾಗಿ ಕೇಳಿ ಬಂದಿತ್ತು. ಈ ಕುರಿತು ತಾಲೂಕು ಆಸ್ಪತ್ರೆಯ ಪ್ರಭಾರ ಮುಖ್ಯವೈದ್ಯಾಧಿಕಾರಿ ಡಾ.ಪಿ.ಕೆ.ಮಲ್ಯ ಹೇಳಿಕೆಯಲ್ಲಿ ಸ್ವಷ್ಟಪಡಿಸಿದ್ದು, ಬಾಣಂತಿ ಹಾಸಿಗೆಯಲ್ಲಿ ಮಲಗಿಕೊಂಡೇ ನವಜಾತ ಶಿಶುವಿಗೆ ಹಾಲುಣ್ಣಿಸಿರುವುದರಿಂದ ಹಾಲು ಮೂಗಿನ ಮೂಲಕವಾಗಿ ಶ್ವಾಸಕೋಶ ಸೇರಿ ಉಸಿರಾಟ ತೊಂದರೆಕ್ಕೀಡಾಗಿ ಮೃತಪಟ್ಟಿದೆ ಎಂದು ತಿಳಿಸಿದ್ದಾರೆ.
4ವರ್ಷದ ಹಿಂದೆ ಇಂತಹದೇ ಘಟನೆ ನಡೆದಿತ್ತು
ಸುಮಾರು 4 ವರ್ಷಗಳ ಹಿಂದೆ ಇಂತಹದೇ ಒಂದು ಘಟನೆ ಕಾರ್ಕಳ ತಾಲೂಕು ಸರಕಾರಿ ಆಸ್ಪತ್ರೆಯಲ್ಲಿ ನಡೆದಿತ್ತು. ಚಿಕ್ಕಮಗಳೂರಿನಿಂದ ಹೆರಿಗೆಗಾಗಿ ಬಂದಿದ್ದ ಬಂದಿದ್ದ ಗರ್ಭಿಣಿಯೋರ್ವರು ಮಗುವೊಂದನ್ನು ಜನ್ಮ ನೀಡಿ ಮರುದಿನ ಮಲಗಿಕೊಂಡು ಜನಜಾತ ಶಿಶುವಿಗೆ ಹಾಲುಣಿಸಿದ ಸಂದರ್ಭದಲ್ಲಿ ಹಾಲು ಮೂಗಿನ ಮೂಲಕ ಶ್ವಾಸಕೋಶದಲ್ಲಿ ಲೀನಗೊಂಡು ನವಜಾತ ಶಿಶು ಕೊನೆಯುಸಿರೆಳೆದಿತ್ತು.